ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಿ: ಶಾಸಕ ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork | Published : Mar 11, 2025 12:48 AM

ಸಾರಾಂಶ

ಟಿ.ಎಂಯಹೊಸೂರು ಪಂಚಾಯ್ತಿ ವ್ಯಾಪ್ತಿ ಶ್ರೀರಾಂಪುರ, ಜಕ್ಕನಹಳ್ಳಿ, ಕಾಳೇನಹಳ್ಳಿಗಳಿಗೆ ನೀರಿನ ಸಮಸ್ಯೆ ಕುರಿತು ಗ್ರಾಪಂ ಪಿಡಿಒ ಅವರಿಂದ ಶಾಸಕರು ಮಾಹಿತಿ ಪಡೆದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ರಾಮಕೃಷ್ಣೇಗೌಡರಿಗೆ, ಶ್ರೀರಾಂಪುರದ ಬಳಿ ಒಂದು ದೊಡ್ಡ ಸಂಪ್ ನಿರ್ಮಿಸಿ ಅದಕ್ಕೆ ಮೋಟರ್ ಅಳವಡಿಸಿ ಪೈಪ್ ಮೂಲಕ ಟಿ.ಎಂ.ಹೊಸೂರು ಗ್ರಾಮದಿಂದ ನೀರು ಒದಗಿಸಿ ನೀರಿನ ಸಮಸ್ಯೆ ನೀಗಿಸಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಿಸಿಲ ಬೇಗೆ ಹೆಚ್ಚಾಗುತ್ತಿರುವುದರಿಂದ ತಾಲೂಕಿ ವಿವಿಧ ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತ ಕ್ರಮ ವಹಿಸುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣ ಪುರಸಭಾ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ಹಲವು ಗ್ರಾಮಗಳಿಗೆ ನೀರಿನ ಸಮಸ್ಯೆಗಳು ಎದುರಾಗಿದೆ. ಮಳೆಗಾಲ ಸಮೀಪಿಸುವರೆಗೂ ಗ್ರಾಪಂ ವ್ಯಾಪ್ತಿ ಪಿಡಿಒ ಹಾಗೂ ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಇದರ ಜೊತೆಗೆ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿ ಎಂದರು.

ಟಿ.ಎಂಯಹೊಸೂರು ಪಂಚಾಯ್ತಿ ವ್ಯಾಪ್ತಿ ಶ್ರೀರಾಂಪುರ, ಜಕ್ಕನಹಳ್ಳಿ, ಕಾಳೇನಹಳ್ಳಿಗಳಿಗೆ ನೀರಿನ ಸಮಸ್ಯೆ ಕುರಿತು ಗ್ರಾಪಂ ಪಿಡಿಒ ಅವರಿಂದ ಶಾಸಕರು ಮಾಹಿತಿ ಪಡೆದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ರಾಮಕೃಷ್ಣೇಗೌಡರಿಗೆ, ಶ್ರೀರಾಂಪುರದ ಬಳಿ ಒಂದು ದೊಡ್ಡ ಸಂಪ್ ನಿರ್ಮಿಸಿ ಅದಕ್ಕೆ ಮೋಟರ್ ಅಳವಡಿಸಿ ಪೈಪ್ ಮೂಲಕ ಟಿ.ಎಂ.ಹೊಸೂರು ಗ್ರಾಮದಿಂದ ನೀರು ಒದಗಿಸಿ ನೀರಿನ ಸಮಸ್ಯೆಯನ್ನು ನೀಗಿಸಲು ಕ್ರಮವಹಿಸುವಂತೆ ಶಾಸಕರು ಸೂಚಿಸಿದರು.

ಅಲ್ಲದೇ, ಪಿ.ಹೊಸಹಳ್ಳಿಯ ಮೊಗರಳ್ಳಿ ಮಂಟಿ, ಕೆ.ಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಚಿನ್ನಾಯಕನಹಳ್ಳಿಯ ಹೊಸ ಬಡಾವಣೆ ನಿವಾಸಿಗಳಿಗೆ ಜನರಿಗೆ ಜಲ ಜೀವನ್ ಮಿಷನ್ ಮೂಲಕ ನೀರು ಒದಗಿಸಬೇಕು. ಅಲ್ಲಿನ ವಾಟರ್ ವ್ಯಾನ್ ನಿವಾಸಿಗಳಿಗೆ ನೀರು ಕೊಡದೆ ತರಲೆ ಮಾಡುತ್ತಿದ್ದಾನೆ. ಆತನನ್ನು ಅಲ್ಲಿಂದ ಬದಲಾಯಿಸಿ ಎಂದು ಪಿಡಿಒ ಡಾ.ಶೋಭಾರಾಣಿ ಅವರಿಗೆ ಸೂಚನೆ ನೀಡಿದರು.

ಪಾಲಹಳ್ಳಿಗೆಯ ಕರಿಮಂಟಿ ಬಡಾವಣೆಗೆ ನೀರು ಕಲ್ಪಿಸಿ, ಆಲಗೂಡು, ದೊಡ್ಡ ಹಾರೋಹಳ್ಳಿ, ಹುಣಸನಹಳ್ಳಿ, ಚೊಟ್ಟನಹಳ್ಳಿ ಈ ಭಾಗದಲ್ಲಿ ಜಲಧಾರೆ ಯೋಜನೆಡಿ ನೀರು ಕೊಡಿ ಎಂದರು.

ಬಲ್ಲೇನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಹನುಮಂತನಗರದಲ್ಲಿ ಜೆಜೆಎಂನ ಮೋಟಾರ್ ಅಳವಡಿಸಬೇಕು. ಮಹದೇವಪುರ ಗ್ರಾಮದ ಎರಡು ವಾರ್ಡ್‌ಗಳಿಗೆ ನೀರಿನ ಸಮಸ್ಯೆ ಇರುವುದಾಗಿ ಮಾಹಿತಿ ಇದೆ. ಇದನ್ನು ಸರಿಪಡಿಸಲು ಸೂಚಿಸಿದರು.

ಸಿದ್ಧಾಪುರದ ಬಳಿ ಬೋರ್ ಕೊರೆಯಬೇಕು. ಗಣಂಗೂರು ಗ್ರಾಮಕ್ಕೆ ನೀರು ಕೊಡಲು ಮುಂದಾಗಬೇಕು. ಕಳೆದ ವರ್ಷ ಟ್ಯಾಂಕ್ ಮೂಲಕ ನೀರು ಕೊಡಲಾಗಿತ್ತು. ಇದಲ್ಲದೆ ಖಾಸಗಿ ವ್ಯಕ್ತಿಗಳ ಬೋರ್‌ಗಳನ್ನು ಬಾಡಿಗೆ ಪಡೆಯಲಾಗಿತ್ತು. ಅವರಿಗೆ ಬಾಡಿಗೆ ಹಣ ನೀಡಿಲ್ಲವಂತೆ ಕೂಡಲೇ ಅವರಿಗೆ ಹಣ ನೀಡಿ ಎಂದರು.

ನೀರಿನ ಸಮಸ್ಯೆ ಇರುವ ಕಡೆ ಖಾಸಗಿ ಬೋರ್‌ಗಳನ್ನು ಬಳಕೆ ಮಾಡಿಕೊಳ್ಳಬೇಕು. ಟಾಸ್ಕ್ ಪೋರ್ಸ್ ಮೂಲಕ ಹೆಚ್ಚಿನ ಹಣ ಬಿಡುಗಡೆ ಮಾಡಿಕೊಂಡು ಜನ-ಜಾನು ವಾರುಗಳಿಗೆ ನೀರು ಸಮಸ್ಯೆಯಾಗದ ರೀತಿ ನೋಡಿಕೊಳ್ಳಲು ಸಭೆಯಲ್ಲಿ ತಿಳಿಸಿದರು.

ತಾಪಂ ನೋಡಲ್ ಅಧಿಕಾರಿಗಳು ಪ್ರತಿ ದಿನ ಒಂದು ಪಂಚಾಯ್ತಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿದ್ದಲ್ಲಿ ತಾಪಂ ಇಒ ಅವರಿಗೆ ಮಾಹಿತಿಗಳ ನೀಡಿ, ತಹಸೀಲ್ದಾರ್ ಹಾಗೂ ತಾಪಂ ಇಒ ಅವರು ಒಮ್ಮೆ ಗ್ರಾಮಗಳಿಗೆ ಭೇಟಿ ನೀಡಬೇಕು. ಸಮಸ್ಯೆ ಇದ್ದರೆ ನನ್ನೊಂದಿಗೆ ಚರ್ಚೆ ಮಾಡಿ ಬಗೆಹರಿಸೋಣ ಎಂದರು.

ಪ್ರತಿ ಮಂಗಳವಾರ ಅಥವಾ ಶನಿವಾರ ವಾರಕ್ಕೆ ಒಂದು ಪಂಚಾಯ್ತಿಯಂತೆ ಗ್ರಾಮಸಭೆ ಸರಳವಾಗಿ ಮಾಡಬೇಕು. ಆ ಪಂಚಾಯಿತಿಗಳ ಸಮಸ್ಯೆ ಗುರುತಿಸಿ ನನಗೆ, ತಾಪಂ ಇಒ ತಿಳಿಸಿದರೆ ಗ್ರಾಮಗಳ ಸಮಸ್ಯೆ ಏನು ಎಂಬುದು ತಿಳಿಯುತ್ತದೆ. ಕಂದಾಯ, ಪಂಚಾಯ್ತಿ ಅಧಿಕಾರಿಗಳು ಹಾಜರಿ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ರಾಮಕೃಷ್ಣೇಗೌಡ ಸೇರಿದಂತೆ ಇತರ ಅಧಿಕಾರಿಗಳು ಗ್ರಾಪಂ ಪಿಡಿಒ ಹಾಜರಿದ್ದರು.

Share this article