ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಮುಂದಿನ ತಿಂಗಳಿನಿಂದ ಬೇಸಿಗೆಯ ತಾಪ ಇನ್ನಷ್ಟು ಹೆಚ್ಚಾಗಲಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಸಿ.ಪಿ.ಯೋಗೇಶ್ವರ್ ತಾಕೀತು ಮಾಡಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಕಾಲಕ್ಕೆ ಉತ್ತಮ ಮಳೆಯಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮಳೆಯೇನಾದರೂ ಕೈಕೊಟ್ಟರೆ ಕುಡಿಯುವ ನೀರಿಗೂ ಸಮಸ್ಯೆ ಉದ್ಬವಿಸಲಿದ್ದು, ಇದನ್ನು ಪರಿಹರಿಸಲು ಅಧಿಕಾರಿಗಳು ಈಗಿನಿಂದಲೇ ಸನ್ನದ್ಧರಾಗುವಂತೆ ಸೂಚಿಸಿದರು.
ಹಾಲು ಪೂರೈಕೆಯಲ್ಲಿ ತಾಲೂಕು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ತಾಲೂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರಾಸುಗಳು ಇವೆ. ಜನರಿಗೆ ಕುಡಿಯುವ ನೀರಿನ ಜತೆಗೆ ದಿನಬಳಕೆಗೂ ನೀರಿನ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆಯೋ, ಅಲ್ಲೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿ ಎಂದು ಸೂಚಿಸಿದರು.ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ಬೋರ್‌ಗಳು, ಶುದ್ಧಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ. ಬೇಸಿಗೆ ಮುಗಿಯುವವರೆಗೂ ೧೫ನೇ ಹಣಕಾಸು ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳದೇ ನೀರಿನ ಸಮಸ್ಯೆಗೆ ಮೀಸಲಿಡಿ ಎಂದು ಸೂಚಿಸಿದರು.
ಆರ್.ಒ.ಪ್ಲಾಂಟ್‌ಗಳನ್ನು ಸುಪರ್ಧಿಗೆ ತೆಗೆದುಕೊಳ್ಳಿ:ತಾಲೂಕಿನಲ್ಲಿರುವ ಬಹುತೇಕ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನೀರು ಸರಿಯಾಗಿ ಶುದ್ಧೀಕರಣವಾಗುತ್ತಿಲ್ಲ, ಕೆಟ್ಟುನಿಂತ ಘಟಕಗಳ ದುರಸ್ತಿಯಾಗುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ. ಸಂಸ್ಥೆಗಳು ನಿರ್ಮಿಸಿರುವ ಆರ್‌ಒ ಘಟಕಗಳನ್ನು ಹೊರತು ಪಡಿಸಿ ಮಿಕ್ಕುಳಿದ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಖಾಸಗಿಯವರ ಸುಪರ್ದಿಯಿಂದ ಬಿಡಿಸಿ ಗ್ರಾಮ ಪಂಚಾಯಿತಿಗಳೇ ವಹಿಸಿಕೊಳ್ಳಬೇಕು. ಯಾವುದೇ ಸಬೂಬು ಹೇಳದೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಪಂಗಳೇ ನಿರ್ವಹಣೆ ಮಾಡಬೇಕು ಎಂದು ತಾಕೀತು ಮಾಡಿದರು.
ಅಧಿಕಾರಿಗಳ ವಿರುದ್ಧ ಗರಂ:ಸಭೆಯ ಮಧ್ಯದಲ್ಲಿ ಗ್ರಾಪಂ ಸದಸ್ಯರೊಬ್ಬರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಕಲುಷಿತ ನೀರನ್ನು ತಂದು ತೋರಿಸಿದರು. ಇದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ನೀರಿನ ಶುದ್ಧತೆಯನ್ನು ಕಾಲಕಾಲಕ್ಕೆ ಪರೀಕ್ಷೆ ನಡೆಸಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಹಾರೊಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯಪಾಲರ ಹೆಸರಿನಲ್ಲಿರುವ ಸರ್ಕಾರಿ ಭೂಮಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸ್ವಾಧೀನದಲ್ಲಿದ್ದರೂ, ಅದನ್ನು ಸುಪರ್ದಿಗೆ ಪಡೆಯದ ಪಿಡಿಒ ವಿರುದ್ಧ ಆರೋಪ ಕೇಳಿಬಂದಾಗ ಗರಂ ಆದ ಶಾಸಕರು, ಸರ್ಕಾರಿ ಆಸ್ತಿ ಉಳಿಸುವುದು ನಿಮ್ಮ ಕೆಲಸವಲ್ಲವೇ ಎಂದು ಹರಿಹಾಯ್ದರು. ಈ ಕೂಡಲೇ ಆ ಜಾಗವನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸುವಂತೆ ತಾಕೀತು ಮಾಡಿದರು.ಸೋಗಾಲ ಗ್ರಾಮದಲ್ಲಿ ಸರಕಾರಿ ಹಳ್ಳವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಬಿ ಖಾತಾ ಮಾಡಿಕೊಟ್ಟಿರುವ ಪಿಡಿಒ ವಿರುದ್ಧ ಗರಂ ಆದ ಶಾಸಕರು ನೀವೆಲ್ಲಾ ಏನು ಕೆಲಸ ಮಾಡುತ್ತೀರಾ, ಎಲ್ಲವನ್ನೂ ನಾವು ಹೇಳಿಯೇ ಮಾಡಿಸಬೇಕಾ, ಸರಕಾರ ನಿಮಗೆ ಸಂಬಳ ಕೊಡುವುದಾದರೂ ಯಾಕೆಂದು ಆಕ್ರೋಶ ವ್ಯಕ್ತ ಪಡಿಸಿದರು. ಮುಂದಿನ ಸಭೆಯೊಳಗೆ ಈ ಎಲ್ಲಾ ಸಮಸ್ಯೆಗಳೂ ಬಗೆಹರಿದಿರಬೇಕೆಂದು ಗಡುವು ನೀಡಿದರು.
ಇದೇ ವೇಳೆ ಶಾಸಕರು ತಾಲೂಕಿನ ಎಲ್ಲ ೩೨ ಗ್ರಾಪಂ ಪಿಡಿಒಗಳಿಂದ ತಮ್ಮ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ, ಬೇಸಿಗೆ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.ಸಭೆಯಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ, ತಾಪಂ ಇಒ ಸಂದೀಪ್, ನಗರಸಭೆ ಅಧ್ಯಕ್ಷ ವಾಸಿಲ್ ಅಲಿಖಾನ್ , ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಕಾವೇರಿ ನೀರಾವರಿ ನಿಗಮದ ಅಧಿಕಾರಿ ಶಿವಕುಮಾರ್ ಇದ್ದರು.
ಜೆಜೆಎಂ ಕಾಮಗಾರಿ ಕುರಿತು ಅಸಮಾಧಾನ:ಜಲಜೀವನ್ ಮಿಷನ್ ಯೋಜನೆಯಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ಕೋಟ್ಯಾಂತರ ರು. ವೆಚ್ಚ ಮಾಡಿಯೂ ಸಹ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಅಧ್ವಾನ ಮಾಡಿದ ಕಾರಣ ಸಮಸ್ಯೆಯಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ರಸ್ತೆಗಳನ್ನು ಬಗೆದು ಪೈಪ್‌ಗಳನ್ನು ಒಡೆದು ಹಾಕಿರುವ ಪರಿಣಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಕಳಪೆ ಕೆಲಸದ ಜೊತೆಗೆ ಅಪೂರ್ಣ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕರೆಸಿ ಕೆಲಸ ಮುಗಿಸುವಂತೆ ಸೂಚಿಸಿ, ಹಾಗೊಂದು ವೇಳೆ ಕಾಮಗಾರಿ ಮುಗಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕೆಲವು ಗ್ರಾಮಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳನ್ನೇ ನಿರ್ಮಿಸಿಲ್ಲ ಎಂಬ ದೂರುಗಳಿವೆ. ಈ ಕುರಿತು ಕ್ರಮ ವಹಿಸುವಂತೆ ಇಒಗೆ ಸೂಚಿಸಿದರು.