ತೀರ್ಥಹಳ್ಳಿ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬರದ ಹಾಹಾಕಾರ ಉಂಟಾಗಿದ್ದು, ಈ ತಾಲೂಕಿಗೆ ರಸಗೊಬ್ಬರದ ಕೊರತೆಯಾಗದಂತೆ ಕ್ರಮಕೈಗೊಳ್ಳುವುದಲ್ಲದೇ ಒಂದು ಕಾಳು ರಸಗೊಬ್ಬರ ತಾಲೂಕಿನಿಂದ ಹೊರಹೋಗದಂತೆ ಅಧಿಕಾರಿಗಳು ಹಾಗೂ ಗೊಬ್ಬರದ ವಿತರಕರು ಎಚ್ಚರ ವಹಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರಸಗೊಬ್ಬರ ಮತ್ತು ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಭೂಮಿಯ ಮಣ್ಣು ಸತ್ತಿದ್ದು, ನಾವು ತಿನ್ನುವ ಆಹಾರ ಪೂರ್ಣ ವಿಷಮಯವಾಗಿದೆ. ರಸಗೊಬ್ಬರದ ಬಳಕೆಯಿಂದ ಬೆಳೆಗಳಿಗೆ ರೋಗಗಳು ಬರುವುದು ಖಚಿತ. ರೋಗಗಳ ನಿಯಂತ್ರಣಕ್ಕೆ ಕೀಟ ನಾಶಕ ಬಳಕೆಯೂ ಅನಿವಾರ್ಯವಾಗಿದೆ. ಹೀಗಾಗಿ ಮಣ್ಣಿನ ಸತ್ವ ಕಳೆದ ಪರಿಣಾಮ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಿಂದೆ ಜಾನುವಾರು ಕೊಟ್ಟಿಗೆಗಳೇ ಗೊಬ್ಬರದ ಕಾರ್ಖಾನೆಗಳಾಗಿದ್ದವು ಎಂದರು.
ಈಚೆಗೆ ವಾಹನಗಳ ಬಳಕೆಗೆ ರೈಲಿನಂತೆ ಎಲೆಕ್ಟ್ರಿಕ್ ಬಳಕೆಯಾಗುತ್ತಿರುವುದು ಪರಿಸರದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಹಾಗೂ ಇದೊಂದು ಕ್ರಾಂತಿಕಾರಕ ಬದಲಾವಣೆಯೂ ಆಗಿದೆ. ಇದೇ ರೀತಿಯ ಬದಲಾವಣೆ ಸಾವಯವ ಗೊಬ್ಬರದ ಬಳಕೆಯಲ್ಲೂ ಆಗಬೇಕಿದ್ದು, ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ರಾಷ್ಟ್ರ ಸೇವೆಯೆಂದೇ ಭಾವಿಸಿ ಸಾವಯವ ಕೃಷಿಯ ಬಗ್ಗೆ ರೈತರ ಮನವೊಲಿಕೆ ಮಾಡಬೇಕು ಎಂದು ರಸಗೊಬ್ಬರ ವಿತರಕರಲ್ಲಿ ಮನವಿ ಮಾಡಿದರು.ಸಭೆಯಲ್ಲಿ ಉಪಸ್ಥಿತರಿದ್ದ ತೀರ್ಥಹಳ್ಳಿ ತಹಸೀಲ್ದಾರ್ ಎಸ್.ರಂಜಿತ್ ಮಾತನಾಡಿ, ನೈಜ ರೈತರನ್ನು ಗುರುತಿಸಿ ಅವರು ಹೊಂದಿರುವ ಭೂಮಿ ವಿಸ್ತೀರ್ಣದ ಆಧಾರದಲ್ಲಿ ರಸಗೊಬ್ಬರ ವಿತರಣೆ ಮಾಡುವುದು ಸೂಕ್ತ. ಇದಕ್ಕೆ ರೈತರ ಗುರುತಿನ ಕಾರ್ಡ್‍ನ್ನು (ಎಫ್‍ಐಡಿ) ಕಡ್ಡಾಯಗೊಳಿಸಿದಲ್ಲಿ ಗೊಬ್ಬರದ ದುರ್ಬಳಕೆ ತಡೆಯಲು ಸಹಕಾರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಪ್ರವೀಣ್, ತಾಲೂಕಿಗೆ ಅಗತ್ಯವಿರುವ ರಸಗೊಬ್ಬರದ ಸ್ಥಿತಿಗತಿಗಳ ಬಗ್ಗೆ ವಿವರಿಸಿ, ಸಸ್ಯಗಳಿಗೆ ನೇರವಾಗಿ ಅಗತ್ಯ ಪೊಷಕಾಂಶಗಳನ್ನು ಒದಗಿಸುವ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಲಿಕ್ವಿಡ್‌ಗಳನ್ನು ಬಳಕೆ ಮಾಡುವುದು ಉತ್ತಮ. ಈ ಬಗ್ಗೆ ಗೊಬ್ಬರದ ವಿತರಕರು ರೈತರಿಗೆ ಮನವರಿಕೆ ಮಾಡಿಕೊಡುವುದು ಸೂಕ್ತ ಎಂದರು.