ಸಕಾಲಕ್ಕೆ ಇ-ಸ್ವತ್ತು ಸೇವೆ ನೀಡಲು ಮುಂದಾಗಿ: ಹರೀಶ್

KannadaprabhaNewsNetwork |  
Published : Nov 22, 2026, 01:45 AM IST
ಹರಿಹರ | Kannada Prabha

ಸಾರಾಂಶ

ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಜೊತೆಯಲ್ಲಿ ಸಕಾಲಕ್ಕೆ ಇ-ಸ್ವತ್ತು ಸಿಗದೇ ಇರುವುದು ಎಲ್ಲ ಗ್ರಾಮ ಪಂಚಾಯಿತಿಗಳ ಸಮಸ್ಯೆಯಾಗಿದೆ. ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.

- ಹರಿಹರ ತಾಲೂಕು ಹನಗವಾಡಿಯಲ್ಲಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ- - -

ಕನ್ನಡಪ್ರಭ ವಾರ್ತೆ ಹರಿಹರ

ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಜೊತೆಯಲ್ಲಿ ಸಕಾಲಕ್ಕೆ ಇ-ಸ್ವತ್ತು ಸಿಗದೇ ಇರುವುದು ಎಲ್ಲ ಗ್ರಾಮ ಪಂಚಾಯಿತಿಗಳ ಸಮಸ್ಯೆಯಾಗಿದೆ. ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹರಿಹರ ತಾಲೂಕು ಆಡಳಿತ, ಹರಿಹರ ತಾಲೂಕು ಪಂಚಾಯಿತಿ ಹಾಗೂ ಸರ್ಕಾರದ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಹೆಚ್ಚಾಗಿ ಬರುತ್ತಿರುವ ಅರ್ಜಿಗಳಲ್ಲಿ ಇ-ಸ್ವತ್ತು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ, ಅನವಶ್ಯಕವಾಗಿ ಅಧಿಕಾರಿಗಳು ಅಲೆದಾಡಿಸುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಗ್ರಾಮಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪ, ಸುಳೆಕೆರೆ ಹಳ್ಳದಲ್ಲಿನ ಹೂಳು ತೆಗೆಯುವುದು, ಶಿಥಿಲಗೊಂಡಿರುವ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ತೆರವು ಸೇರಿದಂತೆ ಇತರ ಬೇಡಿಕೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಹನಗವಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್ ಆರ್.ಬಿ, ವೀರೇಶ್ ಪೂಜಾರ್, ರುದ್ರಮುನಿ ಕೂನರ್, ಬಸವರಾಜ್ ಸಣ್ಣಮನಿ, ಕುಮಾರ್ ಡಿ., ರೇವಣಸಿದ್ದೇಶ, ಎಸ್.ಎಂ, ವೀರೇಶ್ ಅಂಗಡಿ, ರಮೇಶ್ ಗೋಪನಾಳ್ ಅವರು ಗ್ರಾಮದ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. ಅದಕ್ಕೆ ತಹಸೀಲ್ದಾರ್ ಜಿ.ಸಂತೋಷ್ ಉತ್ತರಿಸಿ, ಸಾರ್ವಜನಿಕರಿಂದ ಬಂದ 62 ಅರ್ಜಿಗಳಲ್ಲಿ ಕೆಲವೊಂದನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು. ಉಳಿದವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯುವ ಮೂಲಕ ಶೀಘ್ರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ, ಮಲೇಬೆನ್ನೂರು ಪುರಸಭೆ ಅಧಿಕಾರಿ ರವಿಪ್ರಕಾಶ್, ಕೃಷಿ ಇಲಾಖೆ ಅಧಿಕಾರಿ ನಟರಾಜ್, ಬೆಸ್ಕಾ ಎಇಇ ಲಕ್ಷ್ಮಪ್ಪ, ಆರೋಗ್ಯ ಇಲಾಖೆಯ ಎಂ.ಉಮ್ಮಣ್ಣ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-21ಎಚ್.ಆರ್.ಆರ್4:

ಹನಗವಾಡಿಯ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜಲಿ ಕೊಲೆ ಪ್ರಕರಣ: ಗಿರೀಶ್ ಅಪರಾಧಿ; 25ಕ್ಕೆ ಶಿಕ್ಷೆ ಪ್ರಕಟ
ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಜೀವನ ನಡೆಸಿ