ಬೆಂಗಳೂರು- ಉತ್ತರ ಕರ್ನಾಟಕ ರೈಲ್ವೆ ಪ್ರಯಾಣ ಅವಧಿ ಇಳಿಕೆಗೆ ಕ್ರಮವಹಿಸಿ : ಸಚಿವ ಎಂ.ಬಿ.ಪಾಟೀಲ್‌

KannadaprabhaNewsNetwork |  
Published : Aug 29, 2024, 02:09 AM ISTUpdated : Aug 29, 2024, 05:29 AM IST
Railway Meeting | Kannada Prabha

ಸಾರಾಂಶ

ಬೆಂಗಳೂರು ಉತ್ತರ ಕರ್ನಾಟಕಕ್ಕೆ ಚಲಿಸುವ ರೈಲುಗಳ ಸಮಯವನ್ನು ಮತ್ತಷ್ಟು ಇಳಿಸಬೇಕು ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

 ಬೆಂಗಳೂರು :  ರಾಜ್ಯದ ಗದಗ-ವಾಡಿ, ಧಾರವಾಡ-ಬೆಳಗಾವಿ, ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ಸೇರಿ ಹಲವು ರೈಲ್ವೆ ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ಭೂಸ್ವಾಧೀನ ಸಮಸ್ಯೆ ನಿವಾರಿಸಬೇಕು ಹಾಗೂ ಬೆಂಗಳೂರು- ಉತ್ತರ ಕರ್ನಾಟಕ ಪ್ರಯಾಣದ ಅವಧಿ ಕಡಿಮೆ ಮಾಡಲು ಒತ್ತು ನೀಡುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ರೈಲ್ವೆ ಇಲಾಖೆ ಜತೆ ರಾಜ್ಯ ಸರ್ಕಾರ ಅನುದಾನ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವ ವಿವಿಧ ರೈಲ್ವೆ ಯೋಜನೆಗಳ ಕುರಿತು ನೈಋತ್ಯ ರೈಲ್ವೆ ಅಧಿಕಾರಿಗಳ ಜೊತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಬರುತ್ತಿರುವ ಗೂಡ್ಸ್ ರೈಲುಗಳು ಹುಬ್ಬಳ್ಳಿ ದಕ್ಷಿಣ ನಿಲ್ದಾಣದ ಸಮೀಪದ ಬೈಪಾಸ್ ಮೂಲಕ ಗದಗದ ಕಡೆಗೆ ತಿರುಗುತ್ತಿವೆ. ಅಲ್ಲೂ ಸಹ ಗದಗ ಮುಖ್ಯ ನಿಲ್ದಾಣಕ್ಕೆ ಹೋಗದೆ ಬೈಪಾಸ್‌ನಲ್ಲೇ ವಿಜಯಪುರ, ಸೊಲ್ಲಾಪುರದ ಕಡೆಗೆ ಹೋಗುತ್ತಿವೆ. ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಪ್ರಯಾಣಿಕ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಬರುತ್ತಿವೆ. ಇದರಿಂದಾಗಿ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿವೆ. ಆದ್ದರಿಂದ ನೈಋತ್ಯ ರೈಲ್ವೆಯು ಹುಬ್ಬಳ್ಳಿ ದಕ್ಷಿಣ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಆದಷ್ಟು ಬೇಗ ಅಭಿವೃದ್ಧಿಪಡಿಸಿ, ವಿಜಯಪುರ ಕಡೆ‌ ಹೋಗುವ ರೈಲುಗಳನ್ನು ಅಲ್ಲಿಂದಲೇ ಗದಗ ಕಡೆ ತಿರುಗಿಸುವ ಕೆಲಸ ಆಗಬೇಕು. ಅದೇ ರೀತಿ ಗದಗದಲ್ಲಿಯೂ ಬೈಪಾಸ್ ಮೂಲಕ ವಿಜಯಪುರದ ಕಡೆಗೆ ಹೋಗುವ ಹಾಗೆ ಆಗಬೇಕು.‌ ಇದರಿಂದ ಸಾಕಷ್ಟು ಸಮಯ ಉಳಿಸಬಹುದು ಎಂದರು.

ಸದ್ಯ ಬೆಂಗಳೂರು- ವಿಜಯಪುರ ರೈಲು ಪ್ರಯಾಣಕ್ಕೆ 14-15 ಗಂಟೆ ತಗಲುತ್ತಿದೆ. ಗದಗ- ಹುಟಗಿ ನಡುವೆ 242 ಕಿ.ಮೀ. ನಡುವಿನ ಜೋಡಿ ಹಳಿ ಅಭಿವೃದ್ಧಿ ಕಾರ್ಯ ಬಹುತೇಕ ಮುಗಿದಿದೆ. ಆದರೆ, ಬಾಗಲಕೋಟೆ- ವಂಡಾಲ್ ನಡುವೆ 45 ಕಿ.ಮೀ. ಜೋಡಿ ರೈಲು ಕಾಮಗಾರಿ ಬಾಕಿ‌ ಇದೆ. ಜತೆಗೆ ಆಲಮಟ್ಟಿ ಪ್ರದೇಶದಲ್ಲಿ ಕೂಡ ಕೆಲವು ಕಿರು ಸೇತುವೆ ನಿರ್ಮಾಣ ಆಗಬೇಕು. ಹೀಗಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭಕ್ಕೂ ಅಡ್ಡಿಯಾಗಿದೆ. ಇದನ್ನು ನಿವಾರಿಸಿ ಬೆಂಗಳೂರು- ವಿಜಯಪುರ ಪಯಣ 10-11 ಗಂಟೆಗಳಿಗೆ ಇಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗದಗ-ವಾಡಿ ರೈಲ್ವೆ ಯೋಜನೆಯಲ್ಲಿ ಶಹಾಪುರ-ಬಿರಾಲ್ ಬುಜೂರು ಬಳಿ ಹಳಕಟ್ಟಾ ಬಳಿ 11 ಎಕರೆ ಭೂಸ್ವಾಧೀನದ ಸಮಸ್ಯೆ ಎದುರಾಗಿದೆ. ಇದರಿಂದಾಗಿ 26 ಕಿ.ಮೀ. ಕಾಮಗಾರಿ ನಿಂತಿದೆ ಎಂದು ಅಧಿಕಾರಿಗಳು ಹೇಳಿದರು. ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವ ಎಂ.ಬಿ.ಪಾಟೀಲ್‌, ಭೂಸ್ವಾಧೀನಕ್ಕೆ ಕ್ರಮ ವಹಿಸುವಂತೆ ಮನದಟ್ಟು ಮಾಡಿದರು.

ಗದಗ-ವಾಡಿ ಯೋಜನೆ 2028ರೊಳಗೆ, ಬಾಗಲಕೋಟೆ-ಕುಡಚಿ ಯೋಜನೆ 2026ರ ಡಿಸೆಂಬರ್ ಹೊತ್ತಿಗೆ ಪೂರ್ಣವಾಗಬೇಕು. ತುಮಕೂರು- ದಾವಣಗೆರೆ ಯೋಜನೆಯಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 300 ಎಕರೆ ಕೊಡಬೇಕಾಗಿದೆ. ಗಿಣಿಗೇರಾ-ರಾಯಚೂರು ಯೋಜನೆ 2027ರ ಫೆಬ್ರವರಿ ಹೊತ್ತಿಗೆ ಮುಗಿಯಬೇಕು. ಕೊರಟಗರೆ- ಮಧುಗಿರಿ ನಡುವಿನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ ಸೇರಿ ನೈಋತ್ಯ ರೈಲ್ವೆ ಉನ್ನತ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ