ಕಾರವಾರ: ಜಿಲ್ಲೆಯ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ನಕಲಿ ಕ್ಲಿನಿಕ್‌ಗಳು ಮತ್ತು ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ 3 ಕ್ಲಿನಿಕ್‌ಗಳ ಮೇಲೆ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದ್ದು, 14 ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. 17 ನಕಲಿ ಕ್ಲಿನಿಕ್‌ಗಳಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಸೂಕ್ತ ದಾಖಲೆ ನೀಡಿದ ಕ್ಲಿನಿಕ್‌ಗಳನ್ನು ಮುಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಅಗತಯವಿದ್ದಲ್ಲಿ ಈ ಕಾರ್ಯಕ್ಕೆ ಪೊಲೀಸ್ ನೆರವು ಪಡೆಯುವಂತೆ ಸೂಚಿಸಿದರು.
ಎಲ್ಲ ತಾಲೂಕು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅನಧಿಕೃತ ಕ್ಲಿನಿಕ್‌ಗಳು ವೈದ್ಯರು ಕಾರ್ಯ ನಿರ್ವಹಿಸದಂತೆ ಎಚ್ಚರ ವಹಿಸಬೇಕು. ಅನಧಿಕೃತ ಎಂದು ಕಂಡು ಬಂದಲ್ಲಿ, ತಪಾಸಣೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಕೆಲವು ವೈದ್ಯರು ತಾವು ಪಡೆದಿರುವ ವೈದ್ಯಕೀಯ ಪದ್ಧತಿಯ ಬದಲು ಇತರೆ ವೈದ್ಯಕೀಯ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಅಂತಹ ವೈದ್ಯರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಿನಿ ಬೋರಕರ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯಕ್ ಎಲ್ಲ ತಾಲೂಕುಗಳ ಆರೋಗ್ಯಾಧಿಕಾರಿಗಳು ಇದ್ದರು.