ಮಾದಕ ವಸ್ತುಗಳ ಮಾರಾಟ ತಡೆಗೆ ಕಟ್ಟುನಿಟ್ಟಾಗಿ ಕ್ರಮವಹಿಸಿ-ದಾನಮ್ಮನವರ

KannadaprabhaNewsNetwork |  
Published : Oct 20, 2024, 02:07 AM IST
೧೯ಎಚ್‌ವಿಆರ್೧ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಎಲ್ಲ ಸ್ಥಳಗಳಲ್ಲಿ ಗುಟಕಾ, ತಂಬಾಕು ಮತ್ತು ಸಿಗರೇಟ್ ದಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಜಿಲ್ಲೆಯಲ್ಲಿ ಎಲ್ಲ ಸ್ಥಳಗಳಲ್ಲಿ ಗುಟಕಾ, ತಂಬಾಕು ಮತ್ತು ಸಿಗರೇಟ್ ದಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಂಬಾಕು ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ಹಾವೇರಿ ನಗರದ ಬಸ್ ಸ್ಟ್ಯಾಂಡ್‌ನಲ್ಲಿ ಅತಿ ಹೆಚ್ಚು ಗುಟ್ಕಾ ಸೇವನೆ ಮಾಡುತ್ತಿರುವುದು ಕಂಡುಬರುತ್ತಿದೆ. ಗುಟ್ಕಾ ಜಗಿದು ಉಗಿಯುತ್ತಿರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಇದರಿಂದ ಸಾರ್ವಜನಿಕರು ಇಂತಹ ಪ್ರದೇಶಗಳಲ್ಲಿ ನಿಲ್ಲಲು ಕೂಡ ಆಗುತ್ತಿಲ್ಲ, ಅದನ್ನು ಹತೋಟಿಗೆ ತರಲು ಕ್ರಮ ವಹಿಸಬೇಕು ಎಂದರು. ಚಿಲ್ಲರೆ ಅಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಅಧಿಕ ದಂಡ ವಿಧಿಸಬೇಕು ಮತ್ತು ಅವರಿಗೆ ತಂಬಾಕು ಉತ್ಪನ್ನಗಳನ್ನು ಮಾರದಂತೆ ತಿಳಿ ಹೇಳಬೇಕು ಎಂದರು. ಡಾ. ಸಂತೋಷ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಶಾಲಾ ಕಾಲೇಜಗಳಲ್ಲಿ ಆರೋಗ್ಯ ಜಾಗೃತಿ, ಸಮುದಾಯ ಗುಂಪು ಚರ್ಚೆ, ತರಬೇತಿ ಮತ್ತು ಕಾರ್ಯಾಗಾರಗಳು, ಜಿಲ್ಲಾ ಮಟ್ಟದಲ್ಲಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಪೂರೈಸುವುದು, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ತಂಬಾಕು ನಿಯಂತ್ರಣ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮುಂತಾದವುಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಸಮನ್ವಯದಿಂದ ಕಾರ್ಯನಿರ್ವಹಿಸಿಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಕಾಯಿಲೆಗಳು ಹರಡದಂತೆ ಅಗತ್ಯ ಮುಂಜಾಗ್ರತೆ ವಹಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಬೇಕಾದರೆ ಮೊದಲು ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಅಗತ್ಯವಾಗಿದೆ. ಜನರಿಗೆ ಕಾಯಿಲೆಗಳ ಗಂಭೀರತೆ ಕುರಿತು ಅರಿವು ಮೂಡಿಸಬೇಕು ಆಗ ಮಾತ್ರ ಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಾಂಕ್ರಾಮಿಕ ರೋಗಗಳ ಹತೋಟಿಗೆ ಜನರ ಸಹಕಾರ ಅಷ್ಟೇ ಮುಖ್ಯವಾಗಿದೆ. ಜನರು ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಮೆಡಿಸಿನ್‌ಗಳ ಸಂಗ್ರಹಣೆಯಾಗಬೇಕು, ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾಗಬೇಕು ಎಂದರು. ಸಭೆಯಲ್ಲಿ ರಾಷ್ಟ್ರೀಯ ರೇಬಿಸ್ ನಿಯಂತ್ರಣ, ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಲೇಪತೋಸ್ಪಿರೋಸಿಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ತೀವ್ರವಾದ ಅತಿಸಾರ, ಕ್ಯಾಸನೂರು ಅರಣ್ಯ ರೋಗ, ರಾಷ್ಟ್ರೀಯ ಅಯೋಡಿನ್ ಕೊರತೆ ಅಸ್ವಸ್ಥತೆಗಳ ನಿಯಂತ್ರಣ ಹಾಗೂ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡರು.ಬಳಿಕ ಡಿಎಚ್‌ಓ ಡಾ. ರಾಜೇಶ್ ಸುರಗಿಹಳ್ಳಿ ಸಭೆಗೆ ಅಗತ್ಯ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಾಯಿ ಕಡಿತಕ್ಕೆ ಒಳಗಾದ ಪ್ರಕರಣಗಳು ಒಟ್ಟು ೨,೬೮೨ ಪತ್ತೆಯಾಗಿದ್ದು, ಎಲ್ಲ ರೋಗಿಗಳಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಯಾವುದೇ ರೇಬಿಸ್ ರೋಗದ ಲಕ್ಷಣಗಳು ಕಂಡುಬಂದಿರುವುದಿಲ್ಲ ಎಂದು ಅವರು, ವಿವಿಧ ಚಿಕಿತ್ಸೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!