ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಮೂಲಕ ಸಂಸದ ರಾಧಾಕೃಷ್ಣ ದೊಡ್ಮನಿಯವರು ಈ ಭಾಗದ ಮಹತ್ವದ, ಪ್ರತಿಷ್ಠಿತ ಹಾಗೂ ಬಹು ವರ್ಷಗಳಿಂದ ನೆನೆಗುದಿಗೆ ಬದ್ದಿರುವ ಯೋಜನೆಯೊಂದರ ಪರವಾಗಿ ಸಂಸತ್‌ನಲ್ಲಿ, ರೇಲ್ವೆ ಸಚಿವಾಲಯದ ಮಟ್ಟಿಗೆ ಕೊಂಡೊಯ್ಯುವ ಮೂಲಕ ಗಮನ ಸೆಳೆದಿದ್ದಾರೆ.
ದೆಹಲಿಯಲ್ಲಿ ರೇಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ಈ ಭಾಗದ ಹಲವಾರು ರೇಲ್ವೆ ಕಾಮಗಾರಿ / ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.2014-15ರ ಮಧ್ಯಂತರ ಬಜೆಟ್‌ನಲ್ಲಿ ಕಲಬುರಗಿ ಯಲ್ಲಿ ನೂತನ ರೇಲ್ವೆ ವಿಭಾಗೀಯ ಕಚೇರಿ ಮಂಜೂರಾಗಿ ಅದಕ್ಕೆ ಬೇಕಾಗುವ ರು. 5 ಕೋಟಿ ಅನುದಾನವನ್ನೂ ಕೂಡಾ ತೆಗೆದಿರಿಸಲಾಗಿತ್ತು. ಇದಲ್ಲದೇ, ಯೋಜನೆಗೆ ಅಗತ್ಯವಿರುವ ಜಮೀನನ್ನು ರಾಜ್ಯ ಸರ್ಕಾರ ಉಚಿತವಾಗಿ ಒದಗಿಸಿದೆ.
ಈ ಯೋಜನೆ ಸ್ಥಾಪನೆಗೆ ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಜನರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಹಾಗಾಗಿ, ಕಲಬುರಗಿ ಯಲ್ಲಿ ರೇಲ್ವೆ ವಲಯ ಸ್ಥಾಪನೆ ಮಾಡುವ ಸಲುವಾಗಿ ಕೂಡಲೇ ರೇಲ್ವೆ ಪ್ರಾಧಿಕಾರ ಅಥವಾ ಸಂಬಂಧಿಸಿದವರ ಗಮನಕ್ಕೆ ತಂದು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಸದರು ಪತ್ರದಲ್ಲಿ ವಿನಂತಿಸಿದ್ದಾರೆ.
ಕಲಬುರಗಿ ರೇಲ್ವೆ ನಿಲ್ದಾಣದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಎರಡು ಪಿಟ್ ಲೈನ್ ನಿರ್ಮಾಣ ಕಾರ್ಯ ಮಂಜೂರಾಗಿದೆ. ದಕ್ಷಿಣ ಭಾಗದಲ್ಲಿ ಪಿಟ್ ಲೈನ್ ಕಾಮಗಾರಿ ಪೂರ್ಣಗೊಂಡು ಕಾರ್ಯನಿರ್ವಹಿಸುತ್ತಿದೆ. ಆದರೆ ಉತ್ತರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 150 ಪೂರ್ಣಗೊಂಡಿದ್ದು ಇಕ್ಕೆಲಗಳ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ, ರೇಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ ಸದರಿ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು.