ತ್ಯಾಜ್ಯ ವಿಂಗಡಣೆ, ವಿಲೇವಾರಿಗೆ ತುರ್ತು ಕ್ರಮ ಕೈಗೊಳ್ಳಿ: ಸುಭಾಷ ಆಡಿ

KannadaprabhaNewsNetwork |  
Published : Sep 10, 2024, 01:40 AM IST
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ  ಸುಭಾಷ ಆಡಿ ಅವರು ಹಸಿರು ನ್ಯಾಯಾಧೀಕರಣ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿದರು | Kannada Prabha

ಸಾರಾಂಶ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಅತಿ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ ಆಡಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಅತಿ ಮಹತ್ವದ್ದಾಗಿದೆ. ಎಲ್ಲ ವಾರ್ಡುಗಳಲ್ಲಿ ಹಸಿ ಹಾಗೂ ಒಣ ಕಸ ವಿಂಗಡಣೆಗೆ ಕ್ರಮ ಕೈಗೊಳ್ಳಲು ಸೂಕ್ತ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ ಆಡಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಜನಸಂಖ್ಯೆ ಹಾಗೂ ಉತ್ಪಾದನೆಯಾಗುವ ತ್ಯಾಜ್ಯದ ಬಗ್ಗೆ ಮಾಹಿತಿ ಹೊಂದಿರಬೇಕು. ತಮ್ಮ ವ್ಯಾಪ್ತಿಯ ಪ್ರತಿ ಮನೆಯಿಂದ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗುವಂತೆ ತಿಳಿಸಿದರು.

ಸ್ವಚ್ಛ ಭಾರತ ಮಿಷನ್ ಯೋಜನೆ ಮಾರ್ಗಸೂಚಿಗಳನ್ನು ಎಲ್ಲ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು, ಇದು ಸಾರ್ವಜನಿಕರ ಜವಾಬ್ದಾರಿಯೂ ಆಗಿದ್ದು, ಈ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ನೀಡುವ ಕಾರ್ಯವನ್ನು ಮಾಡಬೇಕಿದೆ. ತ್ಯಾಜ್ಯ ಸಂಗ್ರಹಣೆಗೆ ವೆಬ್‌ಸೈಟ್‌ ಸೃಜಿಸಿ ತ್ಯಾಜ್ಯ ವಿಲೇಗೆ ಮುಂದಾಗುವಂತೆ ತಿಳಿಸಿದರು.

ಕಟ್ಟಡ ತ್ಯಾಜ್ಯವನ್ನು ವಿಲೇ ಮಾಡಲು ಕಟ್ಟಡ ಮಾಲೀಕರಿಗೆ ತಿಳಿವಳಿಕೆ ನೀಡಬೇಕು. ತ್ಯಾಜ್ಯ ವಿಲೇವಾರಿಗೆ ವಾಹನ ಪೂರೈಸಬೇಕು. ವಾಹನದ ಬಾಡಿಗೆ ಕಟ್ಟಡ ಮಾಲೀಕರಿಂದ ಭರಣೆ ಮಾಡಿಸಬೇಕು. ಕಟ್ಟಡ ನಿರ್ಮಾಣ ಅನುಮತಿ ನೀಡುವಾಗ ತ್ಯಾಜ್ಯ ವಿಲೇವಾರಿ ಕುರಿತು ಷರತ್ತು ನಮೂದಿಸಬೇಕು. ಷರತ್ತು ಉಲ್ಲಂಘಿಸಿದವರ ವಿರುದ್ಧ ದಂಡ ಹಾಕಲು ತಿಳಿಸಿದರು.

ಒಂದು ನಗರವನ್ನು ಸುಂದರಾವಗಿಡಲು ವಾಹನ ನಿಲುಗಡೆ ಸ್ಥಳ, ಜಾಹೀರಾತುಗಳ ನಿಯಂತ್ರಣದ ಜೊತೆಗೆ ಬೇಕೆಂದರಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಬಹು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಗಮನ ಹರಿಸಬೇಕು.

ತ್ಯಾಜ್ಯ ವಿಲೇವಾರಿಯಲ್ಲಿ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಒಬ್ಬರ ಮೇಲೊಬ್ಬರು ಆಪಾದನೆ ಮಾಡದೆ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯ ಕಂಡು ಹಿಡಿಯಬೇಕು. ಮರುಬಳಕೆ ಆಗಬಹುದಾದ ತ್ಯಾಜ್ಯದಿಂದ ಸ್ಥಳೀಯ ಸಂಸ್ಥೆಗಳು ಆದಾಯ ಗಳಿಸಬಹುದಾಗಿದ್ದು, ಈ ಕುರಿತು ನಿಗಾವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿಗೆ ಬೇಕಾದ ಜಾಗ ಪಡೆಯಲು, ಮನೆ ಮನೆಗೆ ತೆರಳಿ ಕಸ ಸಂಗ್ರಹ ಸಂದರ್ಭದಲ್ಲಿ ಹಸಿ ಕಸ ಹಾಗೂ ಒಣ ಕಸ ವಿಂಗಡನೆಗೆ ಕ್ರಮ ವಹಿಸಲಾಗುತ್ತಿದೆ. ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ತ್ಯಾಜ್ಯ ವಿಂಗಡಣೆ ಹಾಗೂ ಸೂಕ್ತ ರೀತಿಯಲ್ಲಿ ವಿಲೇವಾರಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ವಿಲೇ ಮಾಡಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳು ಆ್ಯಪ್‌ಗಳನ್ನು ರಚಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಕಟ್ಟಡ ತ್ಯಾಜ್ಯ ವಿಲೇಗೆ ತಗಲುವ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಪಡೆಯುವುದರ ಮೂಲಕ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ರಾಹುಲ ಶಿಂಧೆ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ ಮಲ್ಲಿಕಾರ್ಜುನ ಕಲಾದಗಿ, ಪ್ರಾದೇಶಿಕ ಪರಿಸರ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು.

ಪ್ಲಾಸ್ಟಿಕ್‌ ಬಳಕೆ ತಡೆಗಟ್ಟಿ:

ಕೇಂದ್ರ ಸರ್ಕಾರ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದರೂ ಮಾರುಕಟ್ಟೆಯಲ್ಲಿ ಬಳಕೆ ನಿಂತಿಲ್ಲ. ಅಧಿಕಾರಿಗಳು ನಿರಂತರವಾಗಿ ಅಂಗಡಿ, ಮಾರುಕಟ್ಟೆಗಳಲ್ಲಿ ತಪಾಸಣೆ ನಡೆಸಿ ಪ್ಲಾಸ್ಟಿಕ್‌ ಬಳಕೆ ಅಥವಾ ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಆಡಿ, ಪ್ಲಾಸ್ಟಿಕ್‌, ಇ-ವೇಸ್ಟ್ ಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಕಾಲೇಜು, ಕೈಗಾರಿಕೆ, ಹೋಟೆಲ್, ಮದುವೆ ಮಂಟಪಗಳಲ್ಲಿ ಜಾಗೃತಿ ಮೂಡಿಸಬೇಕು. ಕಾಲೇಜುಗಳಲ್ಲಿ ಗ್ರೀನ್ ಕ್ಯಾಂಪಸ್‌ಗಳನ್ನಾಗಿಸಿ ಪ್ಲಾಸ್ಟಿಕ್‌ ನಿಷೇಧ ಮಾಡುವ ಕುರಿತು ಆಯಾ ಕಾಲೇಜು ಮುಖ್ಯಸ್ಥರನ್ನು ಉತ್ತೇಜಿಸಬೇಕು. ದೇವಸ್ಥಾನಗಳಲ್ಲಿಯೂ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ