ಬಳ್ಳಾರಿ:
ಹೆಣ್ಣು ಭ್ರೂಣಹತ್ಯೆ ಸಾಮಾಜಿಕವಾದ ಪಿಡುಗಾಗಿದ್ದು, ಇದನ್ನು ತಡೆಗಟ್ಟುವಲ್ಲಿ ಕಠಿಣವಾದ ಕಾನೂನು ಕ್ರಮಗಳಲ್ಲದೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ 14 ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ 13 ಆರೋಪಿಗಳು ಜಾಮೀನು ಪಡೆದಿದ್ದಾರೆ. ಹೆಣ್ಣು ಭ್ರೂಣಹತ್ಯೆಯ ಎಲ್ಲ ಪ್ರಕರಣಗಳ ತನಿಖೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹೆಣ್ಣು ಭ್ರೂಣಹತ್ಯೆಯನ್ನು ತಡೆಗಟ್ಟಲಿಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಕಠಿಣವಾದ ಕಾನೂನುಗಳಿವೆ. ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ನಿಗಾ ವಹಿಸಲಿಕ್ಕಾಗಿಯೇ ರಾಜ್ಯಮಟ್ಟದಲ್ಲಿ ಮಂಡಳಿಯನ್ನು ರಚಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಭ್ರೂಣ ಹತ್ಯೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದರು.ರಾಜ್ಯಮಟ್ಟದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸದಸ್ಯತ್ವದ ಬೋರ್ಡ್ ರಚನೆ ಮಾಡಲಾಗಿದೆ. ಈ ಬೋರ್ಡ್ ಸಮರ್ಪಕವಾಗಿ ಕೆಲಸ ಮಾಡದೇ ಇರುವ ಕಾರಣಕ್ಕಾಗಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ಪ್ರಕರಣಗಳು ಬಯಲಿಗೆ ಬರುತ್ತಿವೆ. 1 ಸಾವಿರ ಪುರುಷರಿಗೆ 1 ಸಾವಿರ ಮಹಿಳೆಯರು ಇರಬೇಕು ಎನ್ನುವುದು ಸಾಮಾನ್ಯವಾಗಿದ್ದು, ಕೆಲ ಜಿಲ್ಲೆಗಳಲ್ಲಿ ಈ ಅನುಪಾತವು 1000 ಬಾಲಕರಿಗೆ 760 ಹೆಣ್ಣುಮಕ್ಕಳಿರುವುದು ತುಂಬಾ ಆತಂಕಕಾರಿ ವಿಷಯ ಎಂದು ವಿವರಿಸಿದರು.
ಹೆಣ್ಣು ಭ್ರೂಣಹತ್ಯೆಯನ್ನು ನಿಯಂತ್ರಿಸಲು ಪೊಲೀಸ್, ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ಹೆಣ್ಣು ಭ್ರೂಣಹತ್ಯೆಯನ್ನು ನಿಯಂತ್ರಿಸುತ್ತೇವೆ ಎಂದು ಸದನಕ್ಕೆ ಭರವಸೆ ನೀಡಿದರು.