ಮಂಗಳೂರು: ಧಾರ್ಮಿಕ ಸಂಪ್ರದಾಯ ಹಾಗೂ ಶ್ರದ್ಧಾ ಭಾಗವಾದ ಜನಿವಾರ, ಉಡಿದಾರ, ಶಿವದಾರ, ಕರಿಮಣಿ, ಮಂಗಳಸೂತ್ರದಂತಹ ಅನೇಕ ಸಂಗತಿಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ತಪಾಸಣೆಯ ನೆಪದಲ್ಲಿ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಧರಿಸಿರುವ ಜನಿವಾರವನ್ನು ತೆಗೆಸಿರುವ ಅಧಿಕಾರಿಗಳ ದುರ್ವರ್ತನೆಗೆ ಬ್ರಾಹ್ಮಣ ಒಕ್ಕೂಟದ ಪರವಾಗಿ ಎಸ್. ಪ್ರದೀಪ ಕುಮಾರ ಕಲ್ಕೂರ ತೀವ್ರವಾಗಿ ಖಂಡಿಸಿದ್ದಾರೆ. ಸ್ಕ್ಯಾನರ್ ನಂತಹ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ಬಳಸಿಕೊಳ್ಳುವ ಈ ದಿನಗಳಲ್ಲಿ ಇಂತಹ ಕೀಳು ಮಟ್ಟದ ವರ್ತನೆ ಖಂಡಿತ ಸಹಿಸಲಸಾಧ್ಯ, ಇದು ಧಾರ್ಮಿಕ ಮನೋಭಾವನೆಯ ಸಮಾಜಕ್ಕೆ ಘಾಸಿಯನ್ನು ಉಂಟುಮಾಡಿದೆ. ಮಂತ್ರೋಪದೇಶ ಸಹಿತವಾಗಿ ಧಾರಣೆ ಮಾಡಲಾಗುವ ಜನಿವಾರವನ್ನು ಇತರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಧಿಕಾರಿಗಳು ತೆಗೆಸುವ ಮೂಲಕ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ತೀವ್ರ ಆಘಾತ ಉಂಟು ಮಾಡುತ್ತದೆ. ಅವರ ಪರೀಕ್ಷೆಯ ಉತ್ತರ ಪತ್ರಿಕೆಯ ಬರವಣಿಗೆಯ ಮೇಲೂ ದುಷ್ಪರಿಣಾಮವನ್ನು ಬೀರುವಂತೆ ಮಾಡಿದೆ. ಇದಲ್ಲದೆ ಮಕ್ಕಳ ಹೆತ್ತವರ ಮನಸ್ಸಿಗೂ ನೋವುಂಟು ಮಾಡಿರುವರು. ಆದ್ದರಿಂದ ಈ ಕೃತ್ಯ ಖಂಡಿತಾ ಕ್ಷಮಾರ್ಹವಲ್ಲ ಎಂದಿರುವ ಕಲ್ಕೂರರು, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಈ ಕೂಡಲೇ ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಾಹ್ಮಣ ಒಕ್ಕೂಟದ ಪರವಾಗಿ ಒತ್ತಾಯಿಸಿದ್ದಾರೆ.