ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂಗಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಅಂದಾಜು ೧೦ ಸಾವಿರ ರು. ನಗದು, ೪೦ ಗ್ರಾಂ ಚಿನ್ನಾಭರಣ ಮತ್ತು ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟಿ ಸಹಿತ ಇತರ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳತ್ತಮನೆ ಬಳಿ ನಡೆದಿದೆ.ಸ್ಥಳೀಯ ನಿವಾಸಿ ಭರತ್ ಎಂಬವರ ಅಂಗಡಿಗೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ಒಳಗೆ ನಗದು ಸಹಿತ ಅಮೂಲ್ಯ ವಸ್ತುಗಳಿಗೆ ಹುಡುಕಾಟ ನಡೆಸಿ ಕೈಗೆ ಸಿಕ್ಕಿದ್ದನ್ನು ದೋಚಿದ್ದಾರೆ. ಬುಧವಾರ ಬೆಳಗೆ ಎಂದಿನಂತೆ ಅಂಗಡಿಗೆ ಆಗಮಿಸಿದ ಅದರ ಮಾಲೀಕರಿಗೆ ಅಂಗಡಿ ಮುಂದೆ ನಿಲ್ಲಿಸಿದ್ದ ಸ್ಕೂಟಿ ನಾಪತ್ತೆಯಾಗಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಬಳಿ ಬಂದು ನೋಡಿದ ಸಂದರ್ಭ ಬೀಗ ಮುರಿದು ಅಂಗಡಿ ಕಳ್ಳತನ ಮಾಡಿರುವುದು ಕಂಡು ಬಂದಿದೆ. ಕಳವಾದ ವಸ್ತುಗಳಿಗಾಗಿ ಹುಡುಕಾಟ ನಡೆಸಿದ ಸಂದರ್ಭ ಬ್ಯಾಂಕಿನಿಂದ ಬಿಡಿಸಿಕೊಂಡು ಬಂದು ಅಂಗಡಿಯಲ್ಲಿಟ್ಟಿದ್ದ ಚಿನ್ನಾಭರಣಗಳ ಪೈಕಿ ೧ ಚಿನ್ನದ ಬಳೆ ಮಾತ್ರವೇ ಪತ್ತೆಯಾಗಿದೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಶ್ವಾನ ದಳ, ಬೆರಳಚ್ಚು ಘಟಕ, ವೈಜ್ಞಾನಿಕ ನೆರವು ಘಟಕದ ಸಿಬ್ಬಂದಿಗಳು ಕಳ್ಳರ ಜಾಡು ಪತ್ತೆಗಾಗಿ ಶೋಧ ಕಾರ್ಯ ನಡೆಸಿದರು.
ಅಂಗಡಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟಿ, ವ್ಯಕ್ತಿಯೊಬ್ಬರಿಗೆ ಪಾವತಿ ಮಾಡಬೇಕಾಗಿದ್ದ ೧೦ ಸಾವಿರ ರು. ನಗದು, ೪೦ ಗ್ರಾಂ ಚಿನ್ನಾಭರಣ ಕಳವಾಗಿರುವ ಕುರಿತು ಅಂಗಡಿ ಮಾಲೀಕ ಭರತ್ ಪೊಲೀಸರಿಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಠಾಣಾಧಿಕಾರಿ ಶ್ರೀನಿವಾಸಲು, ಕ್ರೈಂ ಹಾಗೂ ಗ್ರಾಮಾಂತರ ಠಾಣಾ ಗುಪ್ತ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.