ಶಿವಮೊಗ್ಗ: ಪ್ರತಿಭೆಗೆ ಯಾವುದೇ ಜಾತಿ, ಮತ, ಧರ್ಮಗಳಿಲ್ಲ. ಅದು ಯಾರ ಸ್ವತ್ತುವೂ ಅಲ್ಲ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ್ಯಾದ್ರಿ ಕಲಾ ಪರಿಷತ್ತು ಇವರ ಸಂಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಅನ್ವೇಷಣೆ-2025ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭೆಗೆ ಪೂರಕವಾದ ಚಟುವಟಿಕೆಗಳೇ ಇಂದು ವಿದ್ಯಾರ್ಥಿಗಳಿಗೆ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಮತ್ತು ಪರಿಶ್ರಮ ಬಹಳ ಮುಖ್ಯ. ಆದರೆ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಿಂದೆ ಬಿದ್ದು, ಪ್ರತಿಭೆಗಳನ್ನೇ ಕೊಲ್ಲುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ಬದುಕನ್ನು ತಾವೇ ವಿನಾಶದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.ಸೋಮಾರಿಗಳಿಗೆ ಪ್ರತಿಭೆ ಖಂಡಿತ ಒಲಿಯುವುದಿಲ್ಲ. ನಿರಂತರ ಶೋಧನೆ ಅಧ್ಯಯನಗಳಿಂದ ಮಾತ್ರ ಪ್ರತಿಭೆ ಹೊರಬರಲು ಸಾಧ್ಯ ಎಂದ ಅವರು, ವಿದ್ಯಾರ್ಥಿಗಳು ಅಂಬೇಡ್ಕರ್, ಗಾಂಧಿ ಮುಂತಾದ ಹಲವು ಗಣ್ಯರ ಆದರ್ಶಗಳು ಸ್ಫೂರ್ತಿಯಾಗಿ ತೆಗೆದುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಸೈಯ್ಯದ್ ಸನಾವುಲ್ಲಾ ಮಾತನಾಡಿ, ಪ್ರತಿಭೆ ನಾಯಕತ್ವ ಬೆಳೆಸುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಕಾಶ ತಂದುಕೊಡುತ್ತದೆ. ಕೇವಲ ಅಂಕಗಳು ಭವಿಷ್ಯತ್ತನ್ನು ರೂಪಿಸುವುದಿಲ್ಲ. ಇದರ ಜೊತೆಗೆ ಸಾಂಸ್ಕೃತಿಕ, ಕ್ರೀಡೆ ಮುಂತಾದ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ಸಹ್ಯಾದ್ರಿ ಕಾಲೇಜಿನಲ್ಲಿ ಪ್ರತಿಭೆಗಳು ಅನಾವರಣಗೊಳ್ಳುವಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದೇವೆ. ಕಲಾ ಪರಿಷತ್ತು ಪ್ರತಿಭೆಗಳ ಅನಾವರಣಕ್ಕಾಗಿಯೇ ಇರುವ ವಿದ್ಯಾರ್ಥಿ ಸಂಘಟನೆಯಾಗಿದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಪ್ರತಿಭೆಗಳನ್ನು ಹೊರ ಹಾಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲಾ ಪರಿಷತ್ತಿನ ಉಪಾಧ್ಯಕ್ಷ ರಾಧಾಕೃಷ್ಣ.ಬಿ.ಎಸ್ ಇದ್ದರು.ಲತಿಕಾ ಗಣಪತಿ ನಿರೂಪಿಸಿದರು. ನಂತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.