ಪ್ರತಿಭೆ ಜನ್ಮದಿಂದ, ಪಾಂಡಿತ್ಯ ಅಧ್ಯಯನದಿಂದ ದಕ್ಕಿದೆ

KannadaprabhaNewsNetwork |  
Published : Aug 11, 2025, 12:54 AM IST
ಶಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪ್ರತಿಭೆ ಎನ್ನುವುದು ಜನ್ಮದಿಂದ ಬಂದ ಗುಣ. ಪಾಂಡಿತ್ಯ ಎನ್ನುವುದು ಸತತ ಅಧ್ಯಯನ, ಕಠಿಣ ಪರಿಶ್ರಮದಿಂದ ಪ್ರಾಪ್ತಿಯಾಗುವಂತಹದ್ದು ಎಂದು ಬಿಎಲ್‌ಡಿಇ ಸಂಸ್ಥೆಯ ಉಪಾಧ್ಯಕ್ಷ ಜಿ.ಕೆ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿಭೆ ಎನ್ನುವುದು ಜನ್ಮದಿಂದ ಬಂದ ಗುಣ. ಪಾಂಡಿತ್ಯ ಎನ್ನುವುದು ಸತತ ಅಧ್ಯಯನ, ಕಠಿಣ ಪರಿಶ್ರಮದಿಂದ ಪ್ರಾಪ್ತಿಯಾಗುವಂತಹದ್ದು ಎಂದು ಬಿಎಲ್‌ಡಿಇ ಸಂಸ್ಥೆಯ ಉಪಾಧ್ಯಕ್ಷ ಜಿ.ಕೆ.ಪಾಟೀಲ ಹೇಳಿದರು.

ನಗರದ ಜಿ.ಕೆ.ಪಾಟೀಲ ಸಭಾಂಗಣದಲ್ಲಿ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ, ಶಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘ ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕಮಲಾದೇವಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಗುವಿನಲ್ಲಿ ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯನ್ನು ಪೋಷಿಸಿ ಬೆಳೆಸುವುದು ಶಿಕ್ಷಕರ ಹಾಗೂ ಪಾಲಕರ ಆದ್ಯ ಜವಾಬ್ದಾರಿ. ಪ್ರತಿಭೆ ಎನ್ನುವುದು ಜನ್ಮದಿಂದಲೇ ಬಂದಿರುತ್ತದೆ, ಅದು ಪಾಂಡಿತ್ಯವಾಗಿ ಬೆಳಗಲು ಸತತ ಅಧ್ಯಯಯನ, ಕಠಿಣ ಪರಿಶ್ರಮ ಎಂಬ ಸಾಧನಗಳು ಅಗತ್ಯ ಎಂದರು.

ಸಮಾಜ ಸೇವೆಯ ದೃಷ್ಟಿಯಿಂದ ನೂತನ ಟ್ರಸ್ಟ್ ಆರಂಭಗೊಂಡಿರುವುದು ಸಂತೋಷದ ಸಂಗತಿ. ಈ ಟ್ರಸ್ಟ್ ಅಡಿಯಲ್ಲಿ ಮಹಿಳಾ ಶಿಕ್ಷಣಕ್ಕೆ ಪ್ರಥಮಾದ್ಯತೆ ದೊರಕಬೇಕು. ಕುಡುವಕ್ಕಲಿಗ ಸಮಾಜ ಸೇರಿದಂತೆ ಎಲ್ಲ ಸಮಾಜಗಳು ಶಿಕ್ಷಣವಂತರಾಗಬೇಕು ಎಂದು ಕನಸು ಕಂಡಿದ್ದ ಶಿರಸಂಗಿ ಲಿಂಗರಾಜ ಮಹಾರಾಜರ ಆದರ್ಶಗಳ ಬೆಳಕಿನಲ್ಲಿ ನಾವು ಸಾಗಬೇಕಿದೆ. ಕುಡುವಕ್ಕಲಿಗ ಸಮಾಜ ಜಾಗೃತಿಯಾಗುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಸೇವೆ ಜೀವನದ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ಸಮಾಜ ಸೇವೆಯ ಸಂಕಲ್ಪದೊಂದಿಗೆ ಆರಂಭವಾಗಿರುವ ಕಮಲಾದೇವಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಹಲವಾರು ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಆಯೋಜಿಸಬೇಕು. ಪ್ರಮುಖವಾಗಿ ಯುವಕರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗಲು ಕೌಶಲ್ಯಾಧಾರಿತ ತರಬೇತಿ, ವೃತ್ತಿ ಜೀವನ ರೂಪಿಸುವ ತರಬೇತಿ, ಸರಳ ಸಾಮೂಹಿಕ ವಿವಾಹ, ಪ್ರತಿಭಾ ಪುರಸ್ಕಾರ ಹೀಗೆ ನಾನಾ ರೀತಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪ ಕೈಗೊಳ್ಳಿ ಎಂದು ಸಲಹೆ ನೀಡಿದರು.ಈ ಹಿಂದೆ ವಿಜಯಪುರ ಹಾಗೂ ರಾಜಸ್ತಾನದ ಜೈಸಲ್ಮೇರ ದೇಶದಲ್ಲಿಯೇ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗುವ ಎಂಬ ಅಪಕೀರ್ತಿಗೆ ಪಾತ್ರವಾಗಿದ್ದವು. ಆದರೆ ಸಚಿವ ಡಾ.ಎಂ.ಬಿ.ಪಾಟೀಲರು ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಯನ್ನೇ ಮಾಡಿ ಅಮೋಘ ಕಾರ್ಯ ಮಾಡಿದ್ದಾರೆ ಎಂದರು.

ಕವಲಗಿ-ಇಂಡಿಯ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನಮಠದ ಶ್ರೀ ಡಾ.ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಶ್ರೀ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ, ಹಿರಿಯರಾದ ಅಣ್ಣಾಸಾಹೇಬಗೌಡ ಪಾಟೀಲ ಉಕ್ಕಲಿ, ಕಮಲಾದೇವಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್ ಟ್ರಸ್ಟ್ ಅಧ್ಯಕ್ಷ ಸುರೇಶಗೌಡ ಬಿರಾದಾರ, ಜಿ.ಪಂ.ಮಾಜಿ ಸದಸ್ಯೆ ಪ್ರತಿಭಾ ಗೌಡತಿ ಪಾಟೀಲ, ಡಾ.ರಾಜಶೇಖರ ಹೊನ್ನುಟಗಿ, ಆರ್.ಎಸ್.ಜನಗೊಂಡ, ಬಿ.ಬಿ.ಪಾಲಾಯಿ, ಎಸ್.ಎ.ಬಿರಾದಾರ ಸಮಾಜದ ಹಿರಿಯರು ನೌಕರರು ತಾಯಂದಿರು ಮುಂತಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಸುಸ್ಥಿರ, ಬಹುಶಿಸ್ತೀಯ ಸಂಶೋಧನೆ ಅವಶ್ಯಕ: ಸಿದ್ದು ಅಲಗೂರ
ಟಿಕೆಟ್ ರಹಿತ ಪ್ರಯಾಣ: 8 ತಿಂಗಳಲ್ಲಿ ನೈಋತ್ಯ ರೈಲ್ವೆಯಿಂದ ₹ 45 ಕೋಟಿ ದಂಡ ವಸೂಲಿ