ದೊಡ್ಡಬಳ್ಳಾಪುರ: ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಉತ್ತೇಜಿಸುವುದಕ್ಕಿಂತ, ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಪೋಷಕರು ಹಾಗೂ ಸಮುದಾಯದಿಂದ ಆಗಬೇಕಿದೆ ಎಂದು ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ಹೇಳಿದರು.
ಸಾಮಾನ್ಯವಾಗಿ ಆರ್ಥಿಕವಾಗಿ ಸದೃಢರಾಗಿರುವವರು, ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸುತ್ತಾರೆ. ಆದರೆ ತಮಗೆ ಸಾಮರ್ಥ್ಯವಿದ್ದರೂ ಯಾವುದೋ ಕಾರಣಕ್ಕೆ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಪೋಷಕರು ಹಾಗೂ ಸಮಾಜ ಕಡೆಗಣಿಸುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ನಾವು ಉತ್ತೇಜನ ನೀಡಿ ಮುಖ್ಯವಾಹಿನಿಗೆ ಕರೆತರಬೇಕಿದೆ. ಈ ದಿಸೆಯಲ್ಲಿ ಕನ್ನಡ ಜಾಗೃತ ಪರಿಷತ್ತಿನ ವತಿಯಿಂದ ಇಡೀ ರಾಜ್ಯದಲ್ಲಿ ಪ್ರಥಮವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್‍ಯ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಅಂಕಗಳೇ ಮಾನದಂಡಗಳಾಗದೇ ಅವರ ಪ್ರತಿಭೆ ಗುರುತಿಸುವ ಕಾರ್‍ಯವಾಗಬೇಕು. ಕನ್ನಡ ಜಾಗೃತ ಪರಿಷತ್ತಿನ ಏಳಿಗೆಗೆ ಶ್ರಮಿಸಿದವರಿಗೆ ಮಾಸಾಶನ ಸಹ ನೀಡುತ್ತಿರುವುದು ಅಭಿನಂದನೀಯ ಎಂದರು.
ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಕನ್ನಡ ಜಾಗೃತ ಪರಿಷತ್ತು ಬೆಳೆದು ಬಂದ ಹಾದಿಯನ್ನು ವಿವರಿಸಿ ಹೋರಾಟದ ಹಾದಿಯಲ್ಲಿ ಸಾಗಿ ಬಂದ ಈ ಸಂಸ್ಥೆ ಸಮಾಜಮುಖಿ ಕಾರ್‍ಯದಲ್ಲಿ ತೊಡಗಿಸಿಕೊಂಡಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ನಂತರ ಐಟಿಐ ಡಿಪ್ಲೊಮೊ ಮೊದಲಾದ ಆಯ್ಕೆಗಳಿವೆ. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ತೆಗೆದುಕೊಳ್ಳಬಹುದಾಗಿದೆ. ಇದಕ್ಕೆ ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಳ್ಳಬೇಕಿದೆ. ನೀವು ಪಡೆದ ಪ್ರತಿಭಾ ಪುರಸ್ಕಾರಕ್ಕೆ ಮುಂದಿ ನಿಮ್ಮಿಂದಲೂ ಇತರರಿಗೆ ಸೇವೆ ದೊರೆಯುವಂತಾಗಲಿ. ದೃತಿಗೆಡದೇ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕನ್ನಪರ ಹೋರಾಟಗಾರ ಜಿ.ಸತ್ಯನಾರಾಯಣ್, ಕನ್ನಡ ಜಾಗೃತ ಪರಿಷತ್ತಿನ ಪ್ರಧಾನ ಕಾರ್‍ಯದರ್ಶಿ ಡಿ.ಪಿ.ಆಂಜನೇಯ, ಖಜಾಂಚಿ ಡಿ.ಎನ್.ಮುರಳಿ ಮೋಹನ್, ಕಾರ್‍ಯಕಾರಿ ಸಮಿತಿ ಸದಸ್ಯ ಸಿ.ವೆಂಕಟರಾಜು ಹಾಗೂ ಕನ್ನಡ ಜಾಗೃತ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.
6ಕೆಡಿಬಿಪಿ1-ದೊಡ್ಡಬಳ್ಳಾಪುರದಲ್ಲಿ ಕನ್ನಡ ಜಾಗೃತ ಪರಿಷತ್ತಿನ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಸತತ ಪ್ರಯತ್ನದಿಂದ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.