ಕನ್ನಡಪ್ರಭವಾರ್ತೆ ಪುತ್ತೂರು ಅಯೋಧ್ಯೆಯಲ್ಲಿ 22 ರಂದು ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ತೆರಳದೇ ಇರಲು ನಿರ್ಧರಿಸಿರುವುದು ಮೂರ್ಖತನದ ಕೆಲಸ ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅನ್ನೋ ಕಾರಣಕ್ಕೆ ರಾಮನ ಪ್ರತಿಷ್ಠಾಪನೆಗೆ ಹೋಗದಿರುವುದು ಕಾಂಗ್ರೆಸ್ ಪಕ್ಷದ ಮೂರ್ಖತನ ಎಂದ ಅವರು ಈ ನಿರ್ಧಾರ ಸಮಾಜದಲ್ಲಿ ಕೆಟ್ಟ ಸಂದೇಶವನ್ನು ಸಾರಲಿದೆ. ಸುದೈವ ಅಂದರೆ ಯಾರು ಅಯೋಧ್ಯೆಗೆ ಹೋಗದಿರಲು ನಿರ್ಧರಿಸಿದ್ದಾರೋ, ಅವರದೇ ಪಕ್ಷದ ಕೆಲವರು ಹೋಗುವ ಮಾತನಾಡಿದ್ದಾರೆ. ಅಂಥವರು ನ್ಯಾಯಧರ್ಮದ ಮಾರ್ಗದಲ್ಲಿರುವವರು, ಅಂತವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಮ ಪ್ರತಿಷ್ಠೆ ಪಕ್ಷಾತೀತವಾದ ವಿಚಾರ. ಈ ದೇಶ ರಾಮನ ದೇಶ, ವೈದಿಕ ಸಂಸ್ಕೃತಿ ಹಾಗೆ, ಹೀಗೆ ಎನ್ನುವ ಸ್ವಾಮೀಜಿಗಳು ತಮ್ಮ ಪ್ರತಿಷ್ಠೆಯನ್ನು ಬಿಡಬೇಕು. ರಾಮ ಎಲ್ಲರಿಗೂ ಬೇಕಾದವ, ರಾಮ ಪ್ರತಿಷ್ಠೆ ಅದು ನಮ್ಮ ಆತ್ಮದ ಪ್ರತಿಷ್ಠೆ, ಕೆಲವು ಸ್ವಾಮೀಜಿಗಳು ರಾಮನನ್ನು ಕೆಳ ಜಾತಿಯವರು ಮುಟ್ಟುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ರಾಮನನ್ನು ಎಲ್ಲರೂ ಮುಟ್ಟಬೇಕು. ಕೆಳಜಾತಿಯವನು ಮುಟ್ಟುತ್ತಾನೆ ಎನ್ನುತ್ತಾರೆ. ರಾಮನನ್ನು ಯಾಕೆ ಮುಟ್ಟಬಾರದು, ರಾಮನನ್ನು ಎಲ್ಲರೂ ಮುಟ್ಟಬೇಕು ಎಂದರು.೧೯೮೯ ರಲ್ಲಿ ರಾಮಮಂದಿರದ ಪ್ರತಿಷ್ಟಾಪನೆ ನಡೆದಾಗ ಮೊದಲ ಇಟ್ಟಿಗೆ ಇಟ್ಟಿರೋದು ಉಪೇಕ್ಷಿತ ಸಮುದಾಯದ ಬಂಧು ಆಗಿದ್ದವರು. ಜಾತಿ ಬಗ್ಗೆ ಮಾತನಾಡಿ ಸ್ವಾಮೀಜಿಗಳು ತಮ್ಮ ಗೌರವಕ್ಕೆ ಚ್ಯುತಿ ತರಬೇಡಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಮನವಿ ಮಾಡಿದರು.