ಕನ್ನಡಪ್ರಭ ವಾರ್ತೆ ಮೂಲ್ಕಿ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಹಾಗೂ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಜೊತೆ ಮಾತುಕತೆಯು ಮಾರ್ಚ್ 30ರಂದು ಸಂಜೆ 3.55ರಿಂದ ಕಿನ್ನಿಗೋಳಿ ಸಮೀಪದ ಎಳತ್ತೂರು ಗುತ್ತುನಲ್ಲಿ ನಡೆಯಲಿದೆ.ಗುತ್ತಿನಾರ್ ಬಾಲಕೃಷ್ಣ ಯಾನೆ ಶಂಕರ ರೈ ಉಪಸ್ಥಿತಿಯಲ್ಲಿ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಅವರನ್ನು ಸಾಹಿತಿ, ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಹಾಗೂ ಮೂಡುಬಿದಿರೆ ತಾಲೂಕು ಕಸಾಪದ ಕಾರ್ಯದರ್ಶಿ ಡಾ. ಸುಧಾರಾಣಿ ಮಾತನಾಡಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಹಾಗೂ ಸಂಶೋಧಕಿಯಾಗಿರುವ ಡಾ.ಇಂದಿರಾ ಹೆಗ್ಗಡೆ, ಅಮಾಯಕಿ, ಒಡಲುರಿ, ಮಂಥನ, ಬದಿ ಕಾದಂಬರಿಗಳನ್ನು, ಗುತ್ತಿನಿಂದ ಸೈನಿಕ ಜಗತ್ತಿಗೆ ಅನುಭವ ಕಥನವನ್ನು ಕಾವ್ಯಗಳ ಪುಟದಿಂದ ನೀನೆದ್ದು ನಿಲ್ಲು-ಕವನ ಸಂಕಲನವನ್ನು, ಮೋಹಿನಿಯ ಸೇಡು, ಪುರುಷರೇ ನಿಮಗೆ ನೂರು ನಮನ-ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಇಂದ್ರಪ್ರಸ್ಥದಿಂದ ಐತಿಹಾಸಿಕ ನಡೆ, ಹಿಮಾಲಯ ಶಿಖರಗಳ ಸಾನ್ನಿಧ್ಯದಲ್ಲಿ ನಡೆದಾಟ, ಸಪ್ತ ಕನ್ಯೆಯರ ಕನ್ಯ ಭೂಮಿಯಲ್ಲಿ ನಮ್ಮ ನಡೆ -ಪ್ರವಾಸ ಕಥನಗಳನ್ನು, ಸರ್ ಎಂ. ವಿಶ್ವೇಶ್ವರಯ್ಯರ ಜೀವನ ಚರಿತ್ರೆ, ಆಗೆದಷ್ಟು ಆಳ, ಮೊಗೆದಷ್ಟು ಮಾಹಿತಿ - ಕ್ಷೇತ್ರಧಾರಿತ ಪ್ರವಾಸ ಅನುಭವ ಕೃತಿಗಳನ್ನು ರಚಿಸಿದ್ದಾರೆ.ಬಂಟರು: ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಲ್ ಆರಗಣೆ, ಚೇಳ್ಳಾರುಗುತ್ತು ಮಂಜನ್ನಾಯ್ಕರ್, ತುಳುವರ ಮೂಲತಾನ ಆದಿ-ಆಲಡೆ, ಸಿರಿ ಬಾರಿ ಲೋಕ-ತುಳುನಾಡು, ತುಳುನಾಡಿನ ಕಂಬುಲ ಒಂದು ಅಧ್ಯಯನ ತುಳುನಾಡ ಸಂಸ್ಕೃತಿ ಸಮೀಕ್ಷೆ ಇವು ಇವರ ಸಂಶೋಧನಾ ಕೃತಿಗಳು. ಇವರ ಕೃತಿಗಳು ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಗೊಂಡಿವೆ.ವಸುದೇವಭೂಪಾಲಂ, ಅಂಬರೀಷ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಜಾನಪದ ತಜ್ಞೆ ಗೌರವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಅನಂತರಂಗ ಸಂಶೋಧನಾ ಪ್ರಶಸ್ತಿ, ಕಾಂತಾವರ ಕನ್ನಡ ಸಂಘ, ರಾಣಿ ಅಬ್ಬಕ್ಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಸಂಮಾನ, ಬಹುಮಾನಗಳನ್ನು ಪಡೆದವರು. ಇವರ ನೂರಾರು ಕಥೆ, ಕವನ, ಸಂಶೋಧನ ಬರಹಗಳು ವಿವಿಧ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನಾನಾ ಸಮ್ಮೇಳನಗಳಲ್ಲಿ, ವಿಚಾರ ವಿಚಾರಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇಂತಹ ಸಾಧಕಿ, ಸಾಹಿತಿ, ಸಂಶೋಧಕಿ ಹಾಗೂ ಸಮಾಜಮುಖಿ ಚಿಂತಕಿ, ಇಂದಿರಾ ಹೆಗ್ಗಡೆಯವರೊಂದಿಗೆ ಅವರ ಹುಟ್ಟೂರು ಎಳತ್ತೂರುಗುತ್ತು ಮನೆಯಲ್ಲಿ ಮಾತುಕತೆ ನಡೆಯಲಿದ್ದು ಇಂದಿರಾ ಹೆಗ್ಗಡೆಯವರ ಕವನಗಳ ಗಾಯನವನ್ನು ಲಾವಣ್ಯ ಶೆಟ್ಟಿ ವಾಚಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.