ಮಡಿಕೇರಿ : ಕಳೆದ ವರ್ಷ ಅ.17ರಂದು ಜರುಗಿದ ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಭಕ್ತರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಜಾತ್ರೆ ಸಂದರ್ಭ ಭಾಗಮಂಡಲದಿಂದ ತಲಕಾವೇರಿ ವರೆಗೆ ಎಲ್ಲರಿಗೂ ಉಚಿತ ಬಸ್ ಸೌಕರ್ಯ ನೀಡಲಾಗಿತ್ತು. ಆದರೆ ದೇವಾಲಯ ಸಮಿತಿಯಿಂದ ಹಣ ಪಾವತಿಯಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತೀವ್ರ ಅಮಸಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದು, ತಲಕಾವೇರಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಪ್ರಯಾಣ ದರ ರು.2 ಲಕ್ಷಕ್ಕೂ ಅಧಿಕ ಬಿಲ್ ನೀಡಬೇಕಾಗಿದೆ. ನಮ್ಮ ಬಳಿ ಪಾವತಿ ಮಾಡಲು ಹಣ ಇದೆ. ಕಾವೇರಿ ನೀರಾವರಿ ನಿಗಮದ ಮೂಲಕ ಹಣ ಪಾವತಿಯಾಗುವುದಾದರೆ ಒಳ್ಳೆಯದು ಎಂದು ಹೇಳಿದ್ದಾರೆ.ಟೀಕಟೀಕೆಗೆ ಶಾಸಕ ಅಸಮಾಧಾನ:
ಈ ನಡುವೆ, ತಲಕಾವೇರಿಗೆ ಕಾವೇರಿ ತೀರ್ಥೋದ್ಭವ ದಿನ ಉಚಿತ ಸರ್ಕಾರಿ ಬಸ್ ಸಂಚಾರದ ವೆಚ್ಚವನ್ನು ಕಾವೇರಿ ನೀರಾವರಿ ನಿಗಮದ ಅನುದಾನದ ಮೂಲಕ ಟಿಕೆಟ್ ವೆಚ್ಚ ಭರಿಸಲಾಗಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಈ ತುಕಿಚು ಅನಗತ್ಯವಾಗಿ ವಿವಾದ ಸೃಷ್ಟಿ ಸರಿಯಲ್ಲ. ನಿಜಾಂಶ ಅರಿತುಕೊಳ್ಳಬೇಕು. ಕೆಎಸ್‌ಆರ್‌ಟಿಸಿಗೆ ನೀಡಬೇಕಾಗಿದ್ದ ಪ್ರಯಾಣ ಶುಲ್ಕವನ್ನು ಕಾವೇರಿ ನೀರಾವರಿ ನಿಗಮ ನೀಡಿದ್ದ ಅನುದಾನದಿಂದ ಕೊಡಗು ಜಿಲ್ಲಾಧಿಕಾರಿ ಪಾವತಿ ಮಾಡಿದ್ದಾರೆ. ಈ ವರ್ಷ ಕೂಡ ತಲಕಾವೇರಿ ಗೆ ತೆರಳುವ ಭಕ್ತಾಧಿಗಳಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುತ್ತೇವೆ. ಅಪಪ್ರಚಾರದ ಮೂಲಕ ಭಕ್ತರ ಭಾವನೆಗಳಿಗೆ ನೋವುಂಟು ಮಾಡಬಾರದು ಪೊನ್ನಣ್ಣ ಮನವಿ ಮಾಡಿದ್ದಾರೆ.
ಹಿರಿಯರು, ಮಹಿಳೆಯರು ಭಾಗಮಂಡಲದಿಂದ ತಲಕಾವೇರಿಗೆ ಉಚಿತ ಪ್ರಯಾಣದ ಅವಕಾಶ ಪಡೆದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಹೀಗಿರುವಾಗ ಅನಗತ್ಯ ಸುಳ್ಳು ಸುದ್ದಿ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ತಲಕಾವೇರಿ ದೇವಾಲಯ ಬೊಕ್ಕಸಕ್ಕೆ ನಷ್ಟ ಎಂಬಂತೆ ಬಿಂಬಿಸುವುದು ಸರಿ ಇಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.