- ವಿಜಯಪುರ ಶಾಸಕರಿಗೆ ಚಂದ್ರಶೇಖರ ಪೂಜಾರ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಬಗ್ಗೆ ಕೇವಲವಾಗಿ, ಹಗುರವಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ವಿಜಯಪುರ ಶಾಸಕ ಯತ್ನಾಳ್‌ಗೆ ಶ್ರೀಪೀಠದ ಧರ್ಮದರ್ಶಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಎಚ್ಚರಿಕೆ ರವಾನಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ವಚನಾನಂದ ಸ್ವಾಮೀಜಿ ಬಗ್ಗೆ ಲಘುವಾಗಿ ಮಾತನಾಡಿ, ಹತ್ತಾರು ಕೋಟಿ ಲೂಟಿ ಮಾಡಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದುದು. ಬಸವನಗೌಡ ಪಾಟೀಲ ಯತ್ನಾಳ್ ಬಳಸಿದ ಪದಗಳಂತಹ ಸ್ವಾಮೀಜಿ ನಮ್ಮವರಲ್ಲ ಎಂದರು.
ದಿನದ 24 ಗಂಟೆ ದಾಸೋಹ ಸೇವೆಗೈಯ್ಯುವ ಮಠ ನಮ್ಮದು. ಶ್ರೀ ಪೀಠದ ಬಗ್ಗೆ, ಶ್ರೀಗಳ ಬಗ್ಗೆ ಹಗುರ ಮಾತನಾಡಿದರೆ ಸಮಾಜದ ನಾಯಕನಾಗಿ ಎಚ್ಚರಿಕೆ ನೀಡುತ್ತಿದ್ದೇನೆ. ನಾವು ಬೀದಿಗಿಳಿದರೆ ಸರಿ ಇರುವುದಿಲ್ಲ. ಶ್ರೀ ವಚನಾನಂದ ಸ್ವಾಮೀಜಿಗೆ ಏಕವಚನದಲ್ಲಿ ಯತ್ನಾಳ್ ಮಾತನಾಡುತ್ತಿದ್ದು, ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಿಮಗೆ ಅಂದಂತೆ ಅಂತಾ ಅರ್ಥ ಮಾಡಿಕೊಳ್ಳಬೇಕು. ಖಾವಿಗೆ ಮಾತನಾಡಿದರೆ ಅದು ಎಲ್ಲ ಖಾವಿಧಾರಿಗಳಿಗೂ ಅಂದಂತೆ. ಕೂಡಲ ಶ್ರೀಗಳ ಬಗ್ಗೆ ನಮಗೆ ಗೌರವ, ಅಭಿಮಾನವಿದೆ. ವೀರಶೈವ ಲಿಂಗಾಯತಕ್ಕೆ, ಪಂಚಮಸಾಲಿ ಮೀಸಲಾತಿಗಾಗಿ ನಿಮ್ಮ ಹೋರಾಟಕ್ಕೆ ಗೌರವ, ಅಭಿಮಾನವಿದೆ. ಆದರೆ, ಯತ್ನಾಳರಂತಹ ವ್ಯಕ್ತಿ ಪರ ಮಾತನಾಡಿ, ಆ ಗೌರವಕ್ಕೆ ಯಾಕೆ ಕುಂದು ತಂದುಕೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಕತ್ತಿ, ಅರವಿಂದ ಬೆಲ್ಲದ್ ಸೇರಿದಂತೆ ಅನೇಕ ನಾಯಕರಿದ್ದಾರೆ. ಇಂತಹ ಅಗ್ರಗಣ್ಯ ನಾಯಕರಿಗೆ ಭವಿಷ್ಯವೂ ಇದೆ. ಹಾಗಾಗಿ, ಸ್ವಾಮೀಜಿ ಯಾರೋ ಒಬ್ಬ ವ್ಯಕ್ತಿಗೆ ಓಲೈಸುವುದನ್ನು ನಿಲ್ಲಿಸಲಿ ಎಂದು ಮನವಿ ಮಾಡಿದರು.