ಹಳಿಯಾಳ: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ಬಾರಿ ಮಳೆಗೆ ಜಲಾವೃತಗೊಂಡ ಶಾಸಕರ ಮಾದರಿ ಶಾಲೆಗೆ ತಾಲೂಕಾಡಳಿತ, ಶಿಕ್ಷಕರ ಸಂಘ ಮತ್ತು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ನಿಯೋಗವು ಸೋಮವಾರ ಭೇಟಿ ನೀಡಿ, ಮುಖ್ಯೋಧ್ಯಾಪಕರು, ಶಾಲಾ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗೆ ಧೈರ್ಯ ತುಂಬಿತು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯ್ಕ ಬಾವಿಕೇರಿ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ ಅವರು ಜಲಾವೃತಗೊಂಡ ಶಾಲೆ ಸಂರಕ್ಷಿಸಲು ಮುಖ್ಯೋಧ್ಯಾಪಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮಾಡಿದ ಶ್ರಮವನ್ನು ಶ್ಲಾಘಿಸಿದರು.
ಶಾಲೆ ಮೊದಲ ಸ್ಥಿತಿಗೆ: ಚರಂಡಿಯ ರಾಡಿ ನೀರಿನಿಂದ ಮಲಿನಗೊಂಡ ಶಾಲೆ ಶುಚಿಗೊಳಿಸುವ ಕಾರ್ಯವನ್ನು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮರೋಪಾದಿಯಲ್ಲಿ ನಡೆಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಕೆಲವು ಪಾಲಕರು ಶಾಲಾ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.ದಾಖಲೆ ಮಳೆ: ಭಾನುವಾರ ಸಂಜೆ ಸತತ ಎರಡೂ ಗಂಟೆ ದಾಖಲೆ ಮಟ್ಟದ 72 ಮಿಮಿ ಮಳೆಯು ಸುರಿದಿದ್ದರಿಂದ ಎಲ್ಲೆಡೆ ಚರಂಡಿಗಳು ತುಂಬಿ ಉಕ್ಕಿದ ಪರಿಣಾಮ ನೀರು ರಸ್ತೆಗೆ ಹರಿಯತ್ತಲ್ಲದೇ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ಬಡಾವಣೆಗಳಿಗೆ ನುಗ್ಗಿತ್ತು. ಆದರೆ ಯಾವುದೇ ಜೀವಹಾನಿ ಸಂಭವಿಸಲಿಲ್ಲ.
ಎಪಿಎಂಸಿ ಪ್ರಾಂಗಣದಲ್ಲಿ ಒಣಗಿಸಲು ಹಾಕಿದ ಗೋವಿನಜೋಳದಲ್ಲಿ ಮಳೆ ಮತ್ತು ಚರಂಡಿ ನೀರು ತುಂಬಿದ್ದನ್ನು ತೆರವುಗೊಳಿಸಲಾಗಿದೆ ಎಂದು ತಾಲೂಕಾಡಳಿತ ತಿಳಿಸಿದೆ.ಶಿಕ್ಷಕರಿಗೆ ಸನ್ಮಾನ: ಶಾಸಕರ ಮಾದರಿ ಶಾಲೆಯನ್ನು ಸಮಯಪ್ರಜ್ಞೆಯಿಂದ ಸಂರಕ್ಷಿಸಿದ ಶಾಲಾ ಮುಖ್ಯೋಧ್ಯಾಪಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ಒಬ್ಬ ಶಿಕ್ಷಕಿ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದವರು ಆಯೋಜಿಸಿದ ಸತ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ವಹಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಹಬ್ಬು ಮಾತನಾಡಿ, ಶಾಲಾ ಮುಖ್ಯೋಧ್ಯಾಪಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಸುರಿಯುವ ಮಳೆಯನ್ನು ಲೆಕ್ಕಿಸದೇ ನೀರು ತೆರವುಗೊಳಿಸಲು ಮಾಡಿದ ಶ್ರಮವನ್ನು ಕೊಂಡಾಡಿದರು.ಶಾಲಾ ಮೂಖ್ಯೋಧ್ಯಾಪಕ ಸುನೀಲ ಗಾಂವಕರ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಶ ಕೋಕಿತಕರ ಅವರನ್ನು ಮತ್ತು ಶಾಲಾ ಶಿಕ್ಷಕಿ ಮಹಾದೇವಿ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ ಬಾವಿಕೇರಿ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಮಂಡಳಿಯ ಸದಸ್ಯ ಓರ್ವಿಲ್ಲ ಫರ್ನಾಂಡೀಸ್ ಹಾಗೂ ವಕೀಲ ಮುಜಾವರ ಹಾಗೂ ಇತರರು ಇದ್ದರು.