ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಲೂಕು ಕೇಂದ್ರದಲ್ಲಿ ತಾಯಿ-ಮಗು ಆರೈಕೆಗೆ ಮತ್ತು ಹೆರಿಗೆಗೆ ಆಸ್ಪತ್ರೆಯೊಂದು ನಿರ್ಮಾಣವಾಗಲೇಬೇಕೆಂದು ಪಟ್ಟು ಹಿಡಿದಿರುವ ಸಾವಿರಾರು ಮಹಿಳೆಯರು ತಾಯಿ-ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣ ಹೋರಾಟ ಸಮಿತಿ ಕರೆಯ ಹಿನ್ನೆಲೆ ಸರ್ಕಾರವನ್ನು ಒತ್ತಾಯಿಸಲು ಹಾಗೂ ಈ ಭಾಗದ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲು ರಸ್ತೆಗೆ ಇಳಿದಿದ್ದರು. ಹಕ್ಕೊತ್ತಾಯದ ಫಲಕಗಳನ್ನ ಹಿಡಿದು, ಹೆರಿಗೆ ಆಸ್ಪತ್ರೆ ನಿರ್ಮಾಣ ಆಗಬೇಕೆಂಬ ಘೋಷಣೆ ಕೂಗಿ ಚಳುವಳಿ ನಡೆಸಿ, ಎಲ್ಲರ ಗಮನ ಸೆಳೆದರು.
ತಾಲೂಕು ಆಡಳಿತ ಸೌಧದ ಮುಂದೆ ಮಹಿಳೆಯರು ಕಾಲೇಜು ರಸ್ತೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ವೃತ್ತಕ್ಕೆ ತೆರಳಿದರು. ವೃತ್ತದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಬಳಿಕ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಮೂಲಕ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿಗಳು ಕಚೇರಿಯಿರುವ ಸಾರ್ವಜನಿಕ ಆಸ್ಪತ್ರೆಯ ಆವರಣಕ್ಕೆ ತೆರಳಿದರು. ಆಸ್ಪತ್ರೆ ಮುಂಭಾಗ ಕೆಲ ಸಮಯ ಧರಣಿ ಕುಳಿತು ತಹಸೀಲ್ದಾರ್ ಟಿ.ಜಿ. ಸುರೇಸಾಚಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಕೆ. ರವಿಕುಮಾರ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ. ಅಭಿಲಾಷ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಆಂದೋಲನದ ನೇತೃತ್ವವನ್ನು ವಹಿಸಿದ್ದ ಹೋರಾಟ ಸಮಿತಿ ಸಂಚಾಲಕ ಶಿವಕುಮಾರ್ ಮಾತನಾಡಿ, ಕೂಡಲೇ ತಾಯಿ ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಸ್ತುತ ಆಯವ್ಯಯದಲ್ಲಿ ಅನುದಾನವನ್ನು ಮಂಜೂರು ಮಾಡುವ ಮೂಲಕ ಮತ್ತೊಂದು ಹೋರಾಟಕ್ಕೆ ಆಸ್ಪದ ನೀಡಬಾರದೆಂದು ಮನವಿ ಮಾಡಿದರು.
ಎಸ್‌ಐ ಜಗದೀಶ ಧೂಳಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.