ಕನ್ನಡಪ್ರಭ ವಾರ್ತೆ ಬೆಳಗಾವಿ
ಬಾಲ್ಯ ವಿವಾಹ, ಬಾಲ ಗರ್ಭಿಣಿ ಪ್ರಕರಣಗಳ ನಿಯಂತ್ರಣ ಹಾಗೂ ಜನ ಜಾಗೃತಿಗಾಗಿ ಬೆಳಗಾವಿ ಜಿಲ್ಲೆಯ 4 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಅಕ್ಕ ಪಡೆ ಆರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೀದರ್‌ನಲ್ಲಿ ಅಕ್ಕ ಪಡೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಯೋಜನೆಯನ್ನು ಬೆಳಗಾವಿ ಜಿಲ್ಲೆಯ 4 ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಇದು ಯಶಸ್ವಿಯಾದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.ಮಹಿಳಾ ಪೊಲೀಸ್, ಎನ್‌ಸಿಸಿ ಅಧಿಕಾರಿ, ಸಿಬ್ಬಂದಿ ಒಳಗೊಂಡ ಈ ಪಡೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ, ಶಾಲೆ, ಕಾಲೇಜುಗಳಿಗೆ ತೆರಳಿ ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹದಿಹರೆಯದ ಮಕ್ಕಳ ಮೇಲಿನ ಅತ್ಯಾಚಾರ, ಪೋಕ್ಸೋ ಕಾಯ್ದೆಯಡಿ ಆಗುವ ಶಿಕ್ಷೆ ಕುರಿತು ಜಾಗೃತಿ ಮೂಡಿಸಲಿವೆ. ಜತೆಗೆ, ಮಹಿಳೆಯರು, ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ಯಾವುದೇ ಸಮಸ್ಯೆ ಆದಲ್ಲಿ ತಕ್ಷಣ ಪೊಲೀಸ್ ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡುವುದು, ಹೆದರದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವ ಕುರಿತು ತಿಳಿಹೇಳಲಿದೆ. ಯಾವುದೇ ಸಮಯದಲ್ಲಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎನ್ನುವ ಧೈರ್ಯವನ್ನು ಈ ಪಡೆ ನೀಡಲಿದೆ ಎಂದರು.ರಾಜ್ಯದಲ್ಲಿ ಸುಮಾರು 2500 ಬಾಲ ಗರ್ಭಿಣಿ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ. ಬಾಲ್ಯ ವಿವಾಹ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಸಮಸ್ಯೆ, ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಪ್ರೇಮ ಪ್ರಕರಣಗಳು, ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ, ಇತರೆ ಕಾರಣಗಳಿಂದ ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಹಲವು ಕಾಯ್ದೆ, ಕಾನೂನುಗಳಿದ್ದರೂ ಸಾಲುತ್ತಿಲ್ಲ. ಹಾಗಾಗಿ ಈ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದು ಅತ್ಯಗತ್ಯ. ಈ ಕಾರ್ಯವನ್ನು ಅಕ್ಕ ಪಡೆ ಮಾಡಲಿದೆ ಎಂದರು.ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಈ ವರ್ಷ 5 ಸಾವಿರ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ( ಪೂರ್ವ ಪ್ರಾಥಮಿಕ ಶಾಲೆ) ಆರಂಭಿಸಲಾಗುತ್ತಿದೆ. ಕಳೆದ ಬಾರಿ ₹200 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ 100 ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಿಸಲಾಗಿದೆ. ಈ ಬಾರಿಯೂ ₹300 ಕೋಟಿ ವೆಚ್ಚದಲ್ಲಿ 200 ಅಂಗಡವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಲಾಗುವುದು. ಕೇಂದ್ರ ಸರ್ಕಾರದಿಂದ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ದೊರೆತಿದೆ ಎಂದು ತಿಳಿಸಿದರು.ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿ 1.24 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ 21 ಕಂತಿನ ಹಣವನ್ನು ಪಾವತಿಸಲಾಗಿದೆ. ಈ ಮೂಲಕ ನಾವು ನುಡಿದಂತೆ ನಡೆದಿದ್ದೇವೆ ಎಂದರು.ನಮಗೆ ಯಾರೂ ಆಫರ್ ಕೊಟ್ಟಿಲ್ಲ: ಸಚಿವೆ ಲಕ್ಷ್ಮೀ
ಬಿಡಿಸಿಸಿ ಬ್ಯಾಂಕ್ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ತಮ್ಮ ರಾಜಕೀಯ ಭವಿಷ್ಯದ ತೀರ್ಮಾನ ಕೈಗೊಳ್ಳಲು ಸ್ವತಂತ್ರರು. ಈ ಕುರಿತು ನೀವು ಚನ್ನರಾಜ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕೇಳಬೇಕು. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಚನ್ನರಾಜ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಫಲ ಸಿಕ್ಕೆ ಸಿಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ರಾಜಕೀಯದಲ್ಲಿ ಶ್ರಮ, ಹಣ ಹೂಡಿಕೆ ಮಾಡಿದರೆ ದೀರ್ಘಾವಧಿಗೆ ಅದರ ಪ್ರತಿಫಲವನ್ನು ನಿರೀಕ್ಷೆ ಮಾಡಬೇಕಾಗುತ್ತದೆ. ಹಣ ಹೂಡಿಕೆ ಮಾಡಿದ ತಕ್ಷಣವೇ ಫಲ ಬಯಸುವುದು ಮೂರ್ಖತನದ ಪರಮಾವಧಿಯಾಗಿದೆ. ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮಗೆ ಯಾರೂ ಆಫರ್ ಕೊಟ್ಟಿಲ್ಲ. ನಾವು ಕೂಡ ಆಫರ್ ತೆಗೆದುಕೊಂಡಿಲ್ಲ. ಭವಿಷ್ಯಲ್ಲಿ ಒಳ್ಳೆ ಫಲವನ್ನು ನಾವು ನಿರೀಕ್ಷೆ ಮಾಡುತ್ತೇವೆ. ನಮ್ಮ ಒಂದೇ ಕುಟುಂಬಕ್ಕೆ ಪಕ್ಷದ ಹೈಕಮಾಂಡ್‌ನಿಂದ ಚುನಾವಣೆಗೆ ಸ್ಪರ್ಧಿಸಲು 3 ಟಿಕೆಟ್ ಪಡೆದಿದ್ದೇವೆ. ಇದು ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ರಾಹುಲ ಜಾರಕಿಹೊಳಿ ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಸ್ವಾಗತಾರ್ಹ. ಅವರ ಗೆಲುವಿಗೆ ಶ್ರಮಿಸುತ್ತೇವೆ.-ಲಕ್ಷ್ಮೀ ಹೆಬ್ಬಾಳಕರ,
ಸಚಿವೆ.