ಹೇಮಾವತಿ ನೀರು ಬಂದಮೇಲೆ ತಾಲೂಕು ಅಭಿವೃದ್ಧಿ

KannadaprabhaNewsNetwork |  
Published : Aug 26, 2025, 01:02 AM IST
೨೫ಶಿರಾ೧, ೨: ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನಾಲೆ ಮೂಲಕ ನೀರು ಹರಿಸುವ ಕಾರ್ಯಕ್ರಮದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಭಾಗವಹಿಸಿ ಗಂಗಾಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಹೇಮಾವತಿ ಜಲಾಶಯದಿಂದ ಶಿರಾ ತಾಲೂಕಿಗೆ ನೀರು ಬಂದಮೇಲೆ ತಾಲೂಕು ಅಭಿವೃದ್ಧಿಯಾಗಿದೆ. ೨೦ ವರ್ಷಗಳ ಹಿಂದ ಶಿರಾಕ್ಕೆ ಹೆಣ್ಣು ಕೊಡುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಶಿರಾ ಹೇಮಾವತಿ ಜಲಾಶಯದಿಂದ ಶಿರಾ ತಾಲೂಕಿಗೆ ನೀರು ಬಂದಮೇಲೆ ತಾಲೂಕು ಅಭಿವೃದ್ಧಿಯಾಗಿದೆ. ೨೦ ವರ್ಷಗಳ ಹಿಂದ ಶಿರಾಕ್ಕೆ ಹೆಣ್ಣು ಕೊಡುತ್ತಿರಲಿಲ್ಲ. ಯಾವೊಬ್ಬ ಅಧಿಕಾರಿಯೂ ಇಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತಿರಲಿಲ್ಲ. ಆದರೆ ಹೇಮಾವತಿ ನೀರು ಹರಿದ ನಂತರ ಎಲ್ಲರೂ ಇಲ್ಲಿ ಇರಲು ಸಾಧ್ಯವಾಯಿತು. ಆದ್ದರಿಂದ ಮುಂದಿನ ಪೀಳಿಗೆಗೆ ಹೇಮಾವತಿ ತಾಯಿಯ ಮಹತ್ವ ತಿಳಿಸಲು ಕಳ್ಳಂಬೆಳ್ಳದಿಂದ ಮದಲೂರಿನ ವರೆಗೆ ಎಲ್ಲಿಯಾದರೂ ಒಂದು ಹೇಮಾವತಿ ತಾಯಿಯ ದೇವಸ್ಥಾನ ನಿರ್ಮಿಸಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ಸೋಮವಾರ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನಾಲೆ ಮೂಲಕ ನೀರು ಹರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಂಗಾಪೂಜೆ ನೆರವೇರಿಸಿ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದ ಶಿರಾ ತಾಲೂಕಿಗೆ ಕಳೆದ ೨೨ ವರ್ಷದಿಂದ ಸತತವಾಗಿ ಹೇಮಾವತಿ ನೀರು ಹರಿಯುತ್ತಿದ್ದು, ಈ ಬಾಗದ ಜನರಿಗೆ ಹೊಸ ಶಕ್ತಿ ನೀಡಿದೆ. ಹೇಮಾವತಿ ನಮ್ಮ ತಾಲೂಕಿಗೆ ಬಂದು ಮದಲೂರು ಕೆರೆಗೆ ಹರಿದ ಸಂದರ್ಭವನ್ನು ನೆನೆದರೆ ನಮ್ಮ ಕಣ್ಣಂಚಲ್ಲಿ ನೀರು ತರುತ್ತದೆ. ಈ ವರ್ಷ ಶಿರಾ ತಾಲೂಕಿಗೆ ಇದುವರೆಗೂ ಸಮರ್ಪಕ ಮಳೆ ಬಂದಿಲ್ಲ. ಆದರೂ ತಾಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಇದಕ್ಕೆ ಕಾರಣ ಕಳ್ಳಂಬೆಳ್ಳ ಕೆರೆ, ಶಿರಾ ದೊಡ್ಡ ಕೆರೆ ತುಂಬಿ ಕೊಡಿ ಹರಿದಿವೆ. ಈಗ ಮದಲೂರು ಸೇರಿದಂತೆ ಮಾರ್ಗಮಧ್ಯೆ ೧೧ ಕೆರೆಗಳಿಗೂ ನೀರು ಹರಿಯಲಿದೆ. ಹಾಗೂ ತಾಲೂಕಿನಲ್ಲಿ ನಿರ್ಮಿಸಿರುವ ಸುಮಾರು ೧೨೫ಕ್ಕೂ ಹೆಚ್ಚು ಬ್ಯಾರೇಜ್‌ಗಳಿಂದ ಅಂತರ್ಜಲ ಹೆಚ್ಚಿದೆ ಎಂದರು. ತುಮಕೂರು ಜಿಲ್ಲೆಯಲ್ಲಿ ನೀರಿನ ವಿಚಾರದಲ್ಲಿ ದೊಡ್ಡ ರಾಜಕಾರಣ ನಡೆಯುತ್ತಿದೆ. ಕೆಲವು ರಾಜಕೀಯ ಮುಖಂಡರು ಅನೇಕ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಮಾಗಡಿಗೆ ನೀರು ಕೊಡಲು ಜಯಚಂದ್ರ ಮುಂದೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಒಂದು ಮಾತು ಹೇಳುತ್ತೇನೆ. ಇಲ್ಲಿಯವರೆಗೆ ಹೇಮಾವತಿ ಜಲಾಶಯಕ್ಕೆ ಬಂದಿರುವ ನೀರು ೮೦ ಟಿಎಂಸಿ ಅದರ ಸಾಮರ್ಥ್ಯ ೪೬ ಟಿಎಂಸಿ, ತುಮಕೂರಿಗೆ ಹಂಚಿಕೆಯಾಗಿರುವುದ ೨೪.೫ ಟಿಎಂಸಿ, ಹಾಸನಕ್ಕೆ ೧೮ ಟಿಎಂಸಿ ನೀರು. ಇಲ್ಲಿಯವರೆಗೆ ಕಾವೇರಿ ನದಿಗಳಿಗೆ ಬಿಟ್ಟಿರುವ ನೀರು ೪೯ ಟಿಎಂಸಿ, ಕರ್ನಾಟಕದಿಂದ ತಮಿಳು ನಾಡಿಗೆ ಬಿಡಬೇಕಿರುವುದು ೧೭೨.೨೫ ಟಿಎಂಸಿ ನೀರು, ಆದರೆ ಇಲ್ಲಿಯವರೆಗೆ ೧೯೫ ಟಿಎಂಸಿ ಬಿಟ್ಟಿದ್ದಾರೆ. ತಮಿಳು ನಾಡಿನಲ್ಲೂ ನೀರು ಹೆಚ್ಚಾಗಿ ಸಮುದ್ರಕ್ಕೆ ಬಿಡುತ್ತಿದ್ದಾರೆ. ಹೀಗಿದ್ದಾಗ ನಮ್ಮ ಭಾಗದ ಕುಣಿಗಲ್‌ಗೂ ನೀರು ಕೊಡಬೇಕು, ಮಾಗಡಿಗೂ ನೀರು ಕೊಡಬೇಕು, ಬೆಂಗಳೂರಿಗೂ ನೀರು ಕೊಡಬೇಕು. ಆದರೆ ನೀರು ತೆಗೆದುಕೊಂಡು ಹೋಗಲು ಯೋಜನೆ ರೂಪಿಸುವುದು ಸರಕಾರದ ಕೆಲಸ. ಸಮುದ್ರಕ್ಕೆ ನೀರು ಹರಿಸುವ ದಾರಳಾತನ ಇರುವ ಜನ ನಮ್ಮ ಭಾಗಕ್ಕೆ ನೀರು ಹರಿಸಿಕೊಳ್ಳಲು ಏಕೆ ಅಡ್ಡಿಪಡಿಸುತ್ತಿದ್ದಾರೆ ಇದು ದುರದೃಷ್ಟಕರ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಸದಸ್ಯ ರಾಧಾಕೃಷ್ಣ.ಬಿ.ಎಂ., ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ವಕೀಲರ ಸಂಘದ ಅಧ್ಯಕ್ಷ ಎಚ್‌.ಗುರುಮೂರ್ತಿಗೌಡ, ಗುಳಿಗೇನಹಳ್ಳಿ ನಾಗರಾಜು, ಪಿ.ಬಿ.ನರಸಿಂಹಯ್ಯ, ಡಿ.ಸಿ.ಅಶೋಕ್, ಬಾಲೇನಹಳ್ಳಿ ಪ್ರಕಾಶ್, ಮಣಿಕಂಠ, ಅಂಜನ್‌ಕುಮಾರ್, ಎಇಇ ಮಂಜುಪ್ರಸಾದ್, ಶಾಸಮರು ಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ