ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಕಾರ್ಯಕಾರಿ ಸಮಿತಿ ಹಾಗೂ ಕಾರ್ಯಪಡೆ ಸಭೆ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿ ಪುನರ್ವಸತಿ ಕಲ್ಪಿಸಲು ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಅನಿರೀಕ್ಷಿತ ದಾಳಿ, ತಪಾಸಣೆ ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಿ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಅಧಿಕಾರಿಗಳಿಗೆ ಸೂಚಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಕಾರ್ಯಕಾರಿ ಸಮಿತಿ ಹಾಗೂ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕರು ಕಂಡುಬರುವ ಸ್ಥಳದ ಮಾಹಿತಿ ಬಂದ ನಂತರ ಕೂಡಲೇ ತ್ವರಿತವಾಗಿ ಸಂಬಂಧಿಸಿದ ಅಧಿಕಾರಿಗಳು ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿ ಪನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು. ಅನಿರೀಕ್ಷಿತ ದಾಳಿಗಳು, ತಪಾಸಣೆ ಗಳನ್ನು ನಡೆಸಿ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಲು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಸೂಚಿಸಿದರು.ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ ಅಂತಹವರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ 02 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ 20 ಸಾವಿರಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು 50 ಸಾವಿರಗಳ ವರೆಗೆ ಹೆಚ್ಚಿಸಬಹುದಾದಂತಹ ದಂಡ ಅಥವಾ ಎರಡನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಅನಿರೀಕ್ಷಿತ ತಪಾಸಣೆ ಮತ್ತು ದಾಳಿಯ ವೇಳೆ ವಿವಿಧ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ, ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು, ಆಟೊ ಪ್ರಚಾರ ಕಾರ್ಯಕ್ರಮಗಳನ್ನು, ಬೀದಿ ನಾಟಕಗಳನ್ನು, ಗೋಡೆ ಬರಹಗಳನ್ನು, ಕರಪತ್ರವನ್ನು ಮತ್ತು ಭಿತ್ತಿಪತ್ರಗಳನ್ನು, ಅಂಗಡಿಗಳ ಮಾಲೀಕರಿಗೆ ವಿತರಿಸುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಿ ಎಂದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಮಾತನಾಡಿ, ವಿವಿಧ ಅಂಗಡಿ, ಮುಂಗಟ್ಟುಗಳ ಮೇಲೆ ಅನಿರೀಕ್ಷಿತ ದಾಳಿ ಹಾಗೂ ತಪಾಸಣೆ ನಡೆಸಿ 2023-24ನೇ ಸಾಲಿನಲ್ಲಿ 10 ಬಾಲಕಾರ್ಮಿಕ ಹಾಗೂ 27 ಕಿಶೋರ ಕಾರ್ಮಿಕರನ್ನು ಒಟ್ಟು 37 ಮಕ್ಕಳನ್ನು ಹಾಗೂ 2024-25ನೇ ಸಾಲಿನ ಆಗಸ್ಟ್ ಮಾಹೆಯ ಅಂತ್ಯಕ್ಕೆ 02 ಬಾಲ ಕಾರ್ಮಿಕ ಮತ್ತು 28 ಕಿಶೋರ ಕಾರ್ಮಿಕ ಒಟ್ಟು 30 ಮಕ್ಕಳನ್ನು ರಕ್ಷಿಸಲಾಗಿದ್ದು. ರಕ್ಷಿಸಿದ ಎಲ್ಲಾ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಡಾ. ಸುನಿಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮ. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸುಬ್ಬರಾವ್.ಎಸ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕಿನ ಕಾರ್ಮಿಕ ಅಧಿಕಾರಿಗಳು ಹಾಜರಿದ್ದರು.ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತಲಿನಲ್ಲಿ ಯಾವುದೇ ಮಕ್ಕಳನ್ನು ದುಡಿಮೆಗೆ ನೇಮಿಸಿ ಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಮಾಡುವುದರ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು.
- ಅಮರೇಶ್ .ಹೆಚ್, ಅಪರ ಜಿಲ್ಲಾಧಿಕಾರಿ.