ತಮ್ಮ ಡೀಸಿ ಹುದ್ದೆಗೆ ರಾಜೀನಾಮೆ ಕಾರಣ ಬಿಚ್ಚಿಟ್ಟ ಮಾಜಿ ಐಎಸ್ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌

KannadaprabhaNewsNetwork |  
Published : Sep 04, 2024, 01:45 AM ISTUpdated : Sep 04, 2024, 11:06 AM IST
ಸಂಸದ ಸಸಿಕಾಂತ್‌ ಸೆಂಥಿಲ್‌ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಇಸ್ಲಾಂ, ಕ್ರಿಶ್ಚಿಯನ್‌ರ ಸೇವೆಯನ್ನೇ ಮತಾಂತರ ಎಂದು ಬಿಂಬಿಸಿ ಜನತೆಯ ನಂಬಿಕೆ, ಧೈರ್ಯ ಕುಸಿಯುವಂತೆ ಮಾಡುವ ಸಂಘಟನೆಗಳನ್ನು ದೂರ ಇರಿಸಬೇಕು. ಧರ್ಮ, ಅಪನಂಬಿಕೆಗಳನ್ನು ಹೋಗಲಾಡಿಸಲು ಮುಂದಾಗಬೇಕು ಎಂದರು.

 ಮಂಗಳೂರು :  ಭವಿಷ್ಯದ ಜನಾಂಗ ರೂಪಿಸಲು ರಾಜಕಾರಣ ಮಾಡಬೇಕು. ಪ್ರೀತಿ, ಸಮಾನತೆ, ವೈವಿಧ್ಯತೆಯ ಬಾಳ್ವೆಯ ಚಿಂತನೆಯ ಭಾರತವನ್ನು ಕಟ್ಟಲು ಮುಂದಾಗಬೇಕು ಎಂದು ದ.ಕ. ಮಾಜಿ ಜಿಲ್ಲಾಧಿಕಾರಿ, ತಮಿಳ್ನಾಡಿನ ತಿರುವಳ್ಳೂರ್‌ ಹಾಲಿ ಸಂಸದ ಸಸಿಕಾಂತ್‌ ಸೆಂಥಿಲ್‌ ಹೇಳಿದ್ದಾರೆ.

ಸಂತ ಮದರ್‌ ತೆರೇಸಾ ವಿಚಾರ ವೇದಿಕೆ ಮತ್ತು ಸಾಮರಸ್ಯ ಮಂಗಳೂರು ಇವರ ಆಶ್ರಯದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ‘ಸಂತ ಮದರ್‌ ತೆರೇಸಾರ 27ನೇ ಸಂಸ್ಮರಣಾ ದಿನಾಚರಣೆ’ ಸಲುವಾಗಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾ ಮನೋಭಾವ ಬೇಕು ನಿಜ, ಅದಕ್ಕಿಂತ ಸಹಕಾರ ಮನೋಭಾವ ಇರಬೇಕು. ಅದುವೇ ಮದರ್‌ ತೆರೇಸಾಗೆ ನಾವು ಸಲ್ಲಿಸುವ ಗೌರವ ಎಂದರು. ಸಮಾಜದಲ್ಲಿ ಸಾಮರಸ್ಯ, ಸಂತೋಷ, ನಂಬುಗೆಯ ಬದುಕು ನಡೆಸುವವರೇ ಬಹುಸಂಖ್ಯಾತರು. ಅಂತಹ ಅಲೋಚನೆ ಇಲ್ಲದವರೇ ಅಲ್ಪಸಂಖ್ಯಾತರು. ಸಂವಿಧಾನವನ್ನು ನಂಬಿಕೊಂಡು ಪ್ರೀತಿ, ವಿಶ್ವಾಸದಿಂದ ಸಮಾಜವನ್ನು ಕಟ್ಟಬೇಕು. ಸಂವಿಧಾನ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದು ಅವರು ಆಶಿಸಿದರು.

‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ..’ ಕುರಿತು ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೊರಟಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಕಸಿಯುವ ವ್ಯವಸ್ಥಿತ ಪಿತೂರಿ ಇದಾಗಿದ್ದು, ಸಂವಿಧಾನದ ಆಶಯವನ್ನು ನುಚ್ಚುನೂರು ಮಾಡುವ ಹುನ್ನಾರವಾಗಿದೆ ಎಂದರು.

ಇಸ್ಲಾಂ, ಕ್ರಿಶ್ಚಿಯನ್‌ರ ಸೇವೆಯನ್ನೇ ಮತಾಂತರ ಎಂದು ಬಿಂಬಿಸಿ ಜನತೆಯ ನಂಬಿಕೆ, ಧೈರ್ಯ ಕುಸಿಯುವಂತೆ ಮಾಡುವ ಸಂಘಟನೆಗಳನ್ನು ದೂರ ಇರಿಸಬೇಕು. ಧರ್ಮ, ಅಪನಂಬಿಕೆಗಳನ್ನು ಹೋಗಲಾಡಿಸಲು ಮುಂದಾಗಬೇಕು ಎಂದರು.

ಇನ್ನು ತಮ್ಮ ರಾಜೀನಾಮೆ ಕುರಿತು ಮಾತನಾಡಿದ ಅವರು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದಾಗಿದ್ದರಿಂದ ನಾನು ಹುದ್ದೆ ತ್ಯಜಿಸಿದೆ. ಅದಾಗಿ ಮೂರನೇ ದಿನಕ್ಕೆ ಹುದ್ದೆಗೆ ರಾಜೀನಾಮೆ ನೀಡಿದೆ ಎಂದು ಹೇಳಿದರು.

ಸಾಮಾಜಿಕ ಚಿಂತಕಿ, ಸಾಹಿತಿ ಆಯಿಶಾ ಫರ್ಝಾನಾ ಪ್ರತಿಕ್ರಿಯಿಸಿದರು.

ಸಂತ ಮದರ್‌ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೋ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಬಜಾಲ್‌, ಸಾಮರಸ್ಯ ಅಧ್ಯಕ್ಷ ಮಂಜುಳಾ ನಾಯಕ್‌, ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಕುಂಜತ್ತಬೈಲ್‌, ಗೌರವ ಸಲಹೆಗಾರರಾದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವರೀಸ್‌, ಫಾ.ಜೆ.ಬಿ.ಸಲ್ದಾನಾ, ಡಾ.ಕೃಷ್ಣಪ್ಪ ಕೊಂಚಾಡಿ, ಮುನೀರ್‌ ಕಾಟಿಪಳ್ಳ, ಬಿ.ಎನ್‌.ದೇವಾಡಿಗ, ಕರಿಯ ಮಂಗಳಜ್ಯೋತಿ, ಸುಮತಿ ಎಸ್‌.ಹೆಗ್ಡೆ ಮತ್ತಿತರರಿದ್ದರು.

ಮಂಗಳೂರು ಋಣ ಬಾಕಿ ಇದೆ

ನಾನು ದ.ಕ.ಜಿಲ್ಲಾಧಿಕಾರಿಯಾಗಿ ಪೂರ್ಣಾವಧಿ ಕರ್ತವ್ಯ ನಿರ್ವಹಿಸುವ ಮೊದಲೇ ಸ್ವಯಂ ನಿವೃತ್ತಿ ಹೊಂದಿದ್ದೇನೆ. ಹಾಗಾಗಿ ನನಗೆ ಮಂಗಳೂರಿನ ಋಣ ತೀರಿಸಲು ಬಾಕಿ ಇದೆ. ಸಾಂಸ್ಕೃತಿಕವಾಗಿ ವೈವಿಧ್ಯಮಯ ಬದುಕು ಹೊಂದಿರುವ ಮಂಗಳೂರು ದೇಶದಲ್ಲೇ ಸ್ಟಾರ್‌ ನಗರ ಎನಿಸಿಕೊಂಡಿದೆ. ತಮಿಳುನಾಡಿನಲ್ಲಿ ಹುಟ್ಟಿದ ನಾನು 30 ವರ್ಷ ಅಲ್ಲಿಯೇ ಬೆಳೆದು, ಇಲ್ಲಿಗೆ ಬಂದ ಬ‍ಳಿಕ ಕನ್ನಡ, ಹಿಂದಿ, ಇಂಗ್ಲಿಷ್‌ ಕಲಿತಿದ್ದೇನೆ. ಮಂಗಳೂರಿನಲ್ಲೇ ಬಹುತ್ವದ ದೇಶವನ್ನು ನೋಡಿದ್ದೇನೆ. ಮಂಗಳೂರಿನಲ್ಲಿ ಎಲ್ಲ ಹಬ್ಬಗಳನ್ನು ಜೊತೆಯಾಗಿಯೇ ಆಚರಿಸುತ್ತಾರೆ. ನಮ್ಮಲ್ಲಿ ವಿಭಿನ್ನತೆ ಇದ್ದರೂ ಸಮಾನತೆಯನ್ನು ತೋರುತ್ತಿರುವ ಇದೇ ಐಡಿಯಾ ಆಫ್‌ ಇಂಡಿಯಾ ಎಂದರು.

PREV