ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಫೆಬ್ರವರಿ 13ರಂದು 1000 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಾಧನಾ ಸಮಾವೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಫೆಬ್ರವರಿ 13ರಂದು 1000 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಾಧನಾ ಸಮಾವೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಬಜೆಟ್
ತಮಿಳುನಾಡಿಗೆ ತೆರಳಲು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರ ಜೊತೆಗೂಡಿ ಸ್ವಾಗತಿಸಿದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ. ಬಜೆಟ್ ತಯಾರಿ ಸಂಬಂಧ ಎಲ್ಲಾ ರೀತಿಯ ತಯಾರಿಗಳು ನಡೆದಿದೆ. ಇದೇ ವೇಳೆ ಫೆ.13ರಂದು ಹಾವೇರಿಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಮಾಡುತ್ತೇವೆ. ಸಮಾವೇಶದ ಸಂಬಂಧ ಎಲ್ಲ ರೀತಿ ತಯಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಪಾಲಿಕೆ ಚುನಾವಣೆಗೆ ಸಿದ್ಧರಾಗಿದ್ದೇವೆ
ನಾವು ಬೆಂಗಳೂರು ಪಾಲಿಕೆ ಚುನಾವಣೆಗೆ ಸಿದ್ಧರಾಗಿದ್ದೇವೆ. ಬಿಜೆಪಿ- ಜೆಡಿಎಸ್ ಒಂದಾಗಿ ಚುನಾವಣೆ ನಡೆಸಿದರೂ ನಮಗೆ ಸಮಸ್ಯೆ ಇಲ್ಲ. ಇರುವುದು ಎರಡೇ, ಒಂದು ಕಾಂಗ್ರೆಸ್ ಮತ, ಮತ್ತೊಂದು ಕಾಂಗ್ರೆಸ್ ವಿರೋಧಿ ಮತ. ಇಲ್ಲಿ ಜೆಡಿಎಸ್ ಮತ ಬೇರೆ ಬಿಜೆಪಿ ಮತ ಬೇರೆ ಎಂದಿರುವುದಿಲ್ಲ. ಎರಡು ಪಕ್ಷದ ಮತ ಒಂದೇ ಅಭ್ಯರ್ಥಿಗೆ ಬಿದ್ದರೆ ಕಾಂಗ್ರೆಸ್‌ಗೆ ಸಮಸ್ಯೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ ಎಂದರು.

