ಅನಧಿಕೃತ ಕಟ್ಟಡಗಳನ್ನು ಪರಿಶೀಲನೆ ನಡೆಸಿ ನೋಟಿಸ್ ನೀಡಿ, ಕಟ್ಟಡ ತೆರವುಗೊಳಿಸುವುದಕ್ಕೆ ತಂಡಗಳನ್ನು ರಚಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಬೆಂಗಳೂರು : ಅನಧಿಕೃತ ಕಟ್ಟಡಗಳನ್ನು ಪರಿಶೀಲನೆ ನಡೆಸಿ ನೋಟಿಸ್ ನೀಡಿ, ಕಟ್ಟಡ ತೆರವುಗೊಳಿಸುವುದಕ್ಕೆ ತಂಡಗಳನ್ನು ರಚಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಮಂಗಳವಾರ ಸಭೆ ನಡೆಸಿ ಮಾತನಾಡಿದ ಅವರು, ಅನಧಿಕೃತ ಕಟ್ಟಡಗಳ ಪರಿಶೀಲನೆ ನಡೆಸಿ, ಹೆಚ್ಚುವರಿ ಮಹಡಿ ನಿರ್ಮಿಸಿದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳನ್ನು ಒಳಗೊಂಡ ತಂಡ ರಚಿಸುವಂತೆ ನಿರ್ದೇಶಿಸಿದರು.

ನಕ್ಷೆ ಮಂಜೂರಾತಿ ಪಡೆಯದ, ಕಟ್ಟಡಗಳಿಗೆ ಸೀಲ್

ನಕ್ಷೆ ಮಂಜೂರಾತಿ ಪಡೆಯದ, ಕಟ್ಟಡಗಳಿಗೆ ಸೀಲ್ ಮಾಡಿ, ಕಾಮಗಾರಿ ನಡೆಯದಂತೆ ನಿಗಾ ವಹಿಸಬೇಕು. ಕಟ್ಟಡ ಆರಂಭದಲ್ಲೇ ಶಿಸ್ತು ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಧಿಕೃತ ಕಟ್ಟಡ ನಿರ್ಮಾಣವನ್ನು ತಡೆಯಬೇಕೆಂದು ತಿಳಿಸಿದರು. ಜತೆಗೆ ರಸ್ತೆ ಬದಿಯಲ್ಲಿ ಕಟ್ಟಡ ನಿರ್ಮಾಣದಿಂದ ಉಂಟಾಗುವ ಭಗ್ನಾವಶೇಷಗಳನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 6 ಲಕ್ಷ ಆಸ್ತಿ

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 6 ಲಕ್ಷ ಆಸ್ತಿಗಳಿದ್ದು, ಪ್ರಸಕ್ತ ಸಾಲಿನಲ್ಲಿ 1,281 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಈವರೆಗೆ 733 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದೆ. ಉಳಿದ ಬಾಕಿ ಆಸ್ತಿ ತೆರಿಗೆಯನ್ನು ನಿಗದಿತ ಕಾಲಮಿತಿಯೊಳಗೆ ಸಂಗ್ರಹಿಸಬೇಕು ಎಂದರು.

ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಎಜಿಎಂ‌ಗಳಿಗೆ ಆಯಾ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕು. ಡಾಂಬರೀಕರಣಗೊಂಡ ರಸ್ತೆಗಳಲ್ಲಿ ಟಿವಿಸಿಸಿ ಮೂಲಕ ಗುಣಮಟ್ಟ ಪರಿಶೀಲನೆ ಮಾಡಿ, ರಸ್ತೆ ಗುಂಡಿ ನಿರಂತರವಾಗಿ ಮುಚ್ಚಬೇಕು. ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ ತೆರವುಗೊಳಿಸಿ ಎಂದು ತಿಳಿಸಿದರು.

ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ.ರಾಜೇಂದ್ರ ಮಾತನಾಡಿ, ಆಸ್ತಿ ಪರಿಷ್ಕರಣೆ ಹಾಗೂ ಸುಸ್ತಿದಾರರಿಂದ ಬಾಕಿ ಆಸ್ತಿ ತೆರಿಗೆಯನ್ನು ತ್ವರಿತಗತಿಯಲ್ಲಿ ಸಂಗ್ರಹಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮನೆಗಳ ಮುಂದೆ ಬಾಕಿ ಆಸ್ತಿ ತೆರಿಗೆ ಪಾವತಿಗೆ ನೋಟಿಸ್‌ಗಳನ್ನು ಅಂಟಿಸುವ ಕಾರ್ಯ ನಡೆಯುತ್ತಿದೆ ಎಂದರು.

ಈ ವೇಳೆ ಅಪರ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಮಂಜುನಾಥ ಸ್ವಾಮಿ, ಜಂಟಿ ಆಯುಕ್ತ ಸಂಗಪ್ಪ, ಆರತಿ ಆನಂದ್ ಮೊದಲಾದವರಿದ್ದರು.