ಮನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಸಂಬಂಧ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬುಧವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ

ಬೆಂಗಳೂರು : ಮನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಸಂಬಂಧ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬುಧವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.

ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಜಂಟಿ ಅಧಿವೇಶನ

ಸಂಪುಟ ಸಭೆಯಲ್ಲಿ ಮೊದಲಿಗೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಜಂಟಿ ಅಧಿವೇಶನ ಕರೆಯಲು ದಿನಾಂಕ ನಿಗದಿಯಾಗಲಿದ್ದು, ಅದೇ ಅಧಿವೇಶನದಲ್ಲಿ ‘ಜಿ ರಾಮ್‌ ಜಿ’ ವಿರುದ್ಧ ಚರ್ಚೆ ನಡೆಸಲಿರುವ ಸರ್ಕಾರ, ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಲಿದೆ ಎಂದು ತಿಳಿದುಬಂದಿದೆ.

ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕು. ಹೀಗಾಗಿ ಸರ್ಕಾರ ಜ.20 ಹಾಗೂ 21 ರಂದು ಜಂಟಿ ಅಧಿವೇಶನ ಕರೆಯುವ ನಿರೀಕ್ಷೆ ಇದೆ.

ಮೊದಲಿಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ರಾಜ್ಯ ಸರ್ಕಾರ ಜಿ ರಾಮ್‌ ಜಿ ಕಾಯ್ದೆ ಕುರಿತು ಚರ್ಚೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಅಧಿವೇಶನದ ಅಧಿಕೃತ ದಿನಾಂಕ ಸಂಪುಟ ಸಭೆಯಲ್ಲೇ ಅಂತಿಮಗೊಳ್ಳಲಿದೆ.

ಕಾಯ್ದೆ ವಿರೋಧಿಸಲು ಚರ್ಚೆ:

ಈಗಾಗಲೇ ಮನರೇಗಾ ಯೋಜನೆ ರದ್ದತಿ ವಿರುದ್ಧ ಕಾಂಗ್ರೆಸ್‌ ಗ್ರಾಮ ಮಟ್ಟದಿಂದ ಹೋರಾಟ ಮಾಡಲು ಸಜ್ಜಾಗಿದೆ. ಜತೆಗೆ ರಾಜ್ಯ ಸರ್ಕಾರದಿಂದಲೂ ಕೇಂದ್ರ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಲು ಸಿದ್ಧತೆ ನಡೆಯುತ್ತಿದೆ. ಕೇಂದ್ರದ ಪರಿಷ್ಕೃತ ಯೋಜನೆಯನ್ನು ತಿರಸ್ಕರಿಸಬೇಕೇ? ಅದರ ವಿರುದ್ಧ ಖಂಡನೆ ಮಾಡಿ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕೇ? ಅಥವಾ ಪರಿಷ್ಕರಣೆಗೆ ಒತ್ತಾಯಿಸಬೇಕೇ ಎಂಬ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ.

ಕಳೆದ ಜ.2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆ ವಿರುದ್ಧ ನಿರ್ಣಯಗೊಂಡು ಈ ಕುರಿತು ವಿಧಾನಮಂಡಲ ಅಧಿವೇಶನ ನಡೆಸಿ ಅಲ್ಲೂ ಅಧಿಕೃತ ನಿರ್ಣಯ ಕೈಗೊಳ್ಳಲು ಚರ್ಚಿಸಲಾಗಿತ್ತು.