ಹಾನಗಲ್ಲ: ತುಟ್ಟಿಭತ್ಯೆ ಹಾಗೂ ವೇತನ ಪರಿಷ್ಕರಣೆ ಸ್ಥಗಿತಗೊಳಿಸಲು ಯೋಜಿಸಿರುವ ಕೇಂದ್ರ ಸರ್ಕಾರ ನಿವೃತ್ತರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಇದೇ ವೇಳೆ ಸಂಸದರೂ ಹಾಗೂ ಶಾಸಕರ ವೇತನ ಹಾಗೂ ತುಟ್ಟಿಭತ್ಯೆಯನ್ನು ಚರ್ಚೆ ಇಲ್ಲದೆ ಎಲ್ಲ ಪಕ್ಷಗಳು ಒಂದಾಗಿ ಹೆಚ್ಚಿಸಿ ಜಾರಿಗೆ ತರುತ್ತಿರುವುದು ವಿಷಾದನೀಯ ಎಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ನಿವೃತ್ತ ಪ್ರಾಚಾರ್ಯ ಪ್ರೊ. ಸಿ. ಮಂಜುನಾಥ ತಿಳಿಸಿದರು.
ಇದು ದೇಶಾದ್ಯಂತ ನಿವೃತ್ತರ ಪಾಲಿನ ಕರಾಳ ದಿನ. ಅಲ್ಲದೆ ಇಂದು ಇಡೀ ದೇಶದ ಎಲ್ಲ ನಿವೃತ್ತ ನೌಕರರು ದೇಶದ ಪ್ರಧಾನಿಗೆ ಮನವಿ ಮಾಡಿ, ಇಳಿ ವಯಸ್ಸಿನಲ್ಲಿರುವ ನಿವೃತ್ತ ನಾಗರಿಕರಿಗೆ ಆಘಾತಕಾರಿ ನಿಲುವು ಪ್ರಕಟಿಸಿದೆ. ಇದರಿಂದ ನಿವೃತ್ತ ನೌಕರರು ಆತಂಕಕ್ಕೀಡಾಗಿದ್ದಾರೆ. ಈ ಆದೇಶವನ್ನು ಹಿಂಪಡೆದು ಹಿಂದಿನಂತೆ ನಿವೃತ್ತಿ ಸೌಲಭ್ಯಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ಕಚೇರಿಯಿಂದ ತಹಸೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ತಾಲೂಕು ಅಧ್ಯಕ್ಷ ಎಚ್.ಎನ್. ಪಾಟೀಲ, ರವಿರಾಜ ತಿರುಮಲೆ, ರಮೇಶಗೌಡ ಪಾಟೀಲ, ಪ್ರೊ. ಸಿ. ಮಂಜುನಾಥ, ಪ್ರೊ. ಮಾರುತಿ ಶಿಡ್ಲಾಪೂರ, ಎಸ್.ಬಿ. ಡುಮ್ಮೇರ, ಎನ್.ಎಂ. ತಳವಾರ, ಎನ್.ಎಂ. ಪೂಜಾರ, ಎಚ್.ಐ. ನಾಯಕ, ಉಷಾ ದೇಸಾಯಿ, ಲೀಲಾವತಿ ಪೂಜಾರ, ಎ.ವೈ. ಅಡೆವೆಣ್ಣನವರ, ಎಲ್.ಡಿ. ಯರಕಲ್, ನಾರಾಯಣ ಚಿಕ್ಕೊರ್ಡೆ, ವಿ.ಎಂ. ಕೋತಂಬರಿ, ಎಲ್.ಆರ್. ಬಾರ್ಕಿ, ಎಸ್.ಎಸ್. ಕಾಶೀಕರ ಮೊದಲಾದವರು ಇದ್ದರು.