ತಾಲೂಕು ಪಂಚಾಯಿತಿಯಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆ
ಬೆಳ್ಳೂರಿನಲ್ಲಿ ಫೆ.21 ಹಾಗೂ 22 ರಂದು ನಡೆಯುವ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳು ಸಹಕಾರ ನೀಡಬೇಕು ಎಂದು ಶಾಸಕ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಟಿ.ಡಿ.ರಾಜೇಗೌಡ ಕರೆ ನೀಡಿದರು.
ಗುರುವಾರ ತಾಪಂನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮ್ಮೇಳನದ ಅಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಆಯ್ಕೆ ಸೂಕ್ತವಾಗಿದೆ. ಬೆಳ್ಳೂರು, ಸೀತೂರು ಭಾಗದಲ್ಲಿ ಯಕ್ಷಗಾನ, ನಾಟಕ, ಸಾಹಿತ್ಯ ಆಸಕ್ತರು ಹೆಚ್ಚಾಗಿದ್ದಾರೆ. ಬೆಳ್ಳೂರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿರಬೇಕು. ಎಲ್ಲಾ ಶಾಲೆಗಳ ಶಿಕ್ಷಕರು, ಸರ್ಕಾರಿ ನೌಕರರು 2 ದಿನಗಳ ಕಾಲ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೂ ಪತ್ರ ಬರೆದಿದ್ದೇವೆ. ಕಾನೂನಿನ ಚೌಕಟ್ಟಿನ ಒಳಗೆ ಅವಕಾಶ, ಸೌಲಭ್ಯಗಳನ್ನು ಸಾಹಿತ್ಯ ಸಮ್ಮೇಳನಕ್ಕೆ ನೀಡಬೇಕು ಎಂದರು.ತಾಲೂಕು ಕಸಾಪಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸೇರಿದಂತೆ 12 ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ನಡೆಸಲಾಗುತ್ತದೆ. ವಿಶೇಷವಾಗಿ ಈ ಬಾರಿ ರಾಜ್ಯ ದಲ್ಲೇ ಪ್ರಥಮ ಬಾರಿಗೆ ಯೋಧರ ಗೋಷ್ಠಿ ನಡೆಸುತ್ತೇವೆ. ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಪಡೆಯಲಿದ್ದೇವೆ. ಸಮ್ಮೇಳಾ ಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಗೋಷ್ಠಿಗಳು, ಪ್ರಶಸ್ತಿ ಹಾಗೂ ಸನ್ಮಾನ, ಬಹಿರಂಗ ಅಧಿವೇಶನ, ಸಮಾರೋಪ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಶಾಸಕರು ಭಾಗವಹಿಸಬೇಕು. ಕನ್ನಡದ ಕೆಲಸಗಳಿಗೆ ಎಲ್ಲರೂ ಕೈ ಜೋಡಿಸಬೇಕು. ಜಿಲ್ಲೆಯಲ್ಲೇ 10 ನೇ ಸಾಹಿತ್ಯ ಸಮ್ಮೇಳನ ಉತ್ತಮವಾಗಿ ಮೂಡಿಬರಬೇಕು ಎಂಬುದು ನನ್ನ ಆಶಯ ಎಂದರು.
ಸಭೆಯಲ್ಲಿ ಭಾಗ್ಯನಂಜುಂಡಸ್ವಾಮಿ, ಯಡಗೆರೆ ಮಂಜುನಾಥ್, ಪಿ.ಆರ್.ಸದಾಶಿವ,ಸಮೀರ ನಹೀಂ, ಪ್ರೇಮಶ್ರೀನಿವಾಸ್, ದೇವಂತರಾಜ್ ಗೌಡ, ಶಬಾನಾ ಅಂಜುಮ್, ಬೆಮ್ಮನೆ ಮೋಹನ್, ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು ಭಾಗವಹಿಸಿದ್ದರು.