ರಾಣಿಬೆನ್ನೂರು: ಮಾದಿಗ ಸಮುದಾಯದ ಉಪ ಜಾತಿಗಳಿಗೆ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ನಗರದ ಮೇಡ್ಲೇರಿ ರಸ್ತೆಯ ಶ್ರೀ ಆದಿಶಕ್ತಿ ದೇವಸ್ಥಾನದಿಂದ ಶಾಸಕರ ನಿವಾಸದವರೆಗೂ ತಮಟೆ ಚಳವಳಿ ನಡೆಸಿ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾದಿಗ ಸಮಾಜ ಒಕ್ಕೂಟದ ಜಿಲ್ಲಾಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಸುಪ್ರೀಂಕೋರ್ಟ್ ಆದೇಶವಿದ್ದರೂ ಒಳ ಮೀಸಲಾತಿ ಜಾರಿ ಮಾಡಲು ಸರಕಾರ ಆಯೋಗ ರಚನೆ ಮಾಡಿರುವುದು ಸರಿಯಲ್ಲ. ಕಳೆದ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಘೋಷಿಸಿದಂತೆ ಸುಪ್ರೀಂಕೋರ್ಟಿನ ತೀರ್ಪು ಆಧರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ. ಮೂರು ದಶಕಗಳಿಂದ ಹೋರಾಟಗಳು ನಡೆದಿವೆ. ಜನಸಂಖ್ಯೆಗೆ ಅನುಗುಣವಾಗಿಯೇ ವೈಜ್ಞಾನಿಕವಾದ ಒಳ ಮೀಸಲಾತಿಯ ಸೂತ್ರವನ್ನು ರೂಪಿಸಿ ಈ ಹಿಂದಿನ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ರಾಜ್ಯ ಸರಕಾರವು ಒಳ ಮೀಸಲಾತಿ ಜಾರಿಗೊಳಿಸಬೇಕಿದೆ. ಆದರೇ ಸರ್ಕಾರ ಆಯೋಗ ರಚನೆ ಮಾಡಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಈ ಸಮುದಾಯದ ಮತಗಳಿಂದ ಆರಿಸಿ ಬಂದ ಶಾಸಕರು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಆಧಿವೇಶನದಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತಿ ಸಮಾಜದ ಬೇಡಿಕೆಗಳನ್ನು ಜಾರಿಗೆಗೊಳಿಸಲು ಶ್ರಮಿಸಬೇಕು ಎಂದರು.
ಡಿಎಸ್‌ಎಸ್ ತಾಲೂಕಾಧ್ಯಕ್ಷ ಮೈಲಪ್ಪ ದಾಸಪ್ಪನವರ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿಯಾಗುವ ವರೆಗೆ ಬ್ಯಾಕ್ಲಾಗ ಸೇರಿದಂತೆ ಯಾವುದೇ ಹುದ್ದೆ ನೇಮಕಾತಿ ತುಂಬಬಾರದು, ಮುಂಬಡ್ತಿ ನೀಡಬಾರದು, ಜನಗಣತಿ ಜಾತಿ ವಿವರವನ್ನು ಮುನ್ನಲೆಗೆ ತಂದು ಎಸ್‌ಸಿ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ ಧೋರಣೆ ಸಲ್ಲದು. ಸುಪ್ರೀಂ ಕೋರ್ಟಿನ ತೀರ್ಪನ್ನು ಬದಿಗಿರಿಸಿ ವಿಳಂಬದ ಒಳ ಹುನ್ನಾರವನ್ನು ಮುಂದುವರಿಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರಕಾರವು ಎದುರಿಸಬೇಕಾಗುತ್ತದೆ. ರಾಜಕೀಯ ಕಾರಣಗಳಿಂದಾಗಿ ಮಾದಿಗರ, ಹೊಲೆಯರ ಮತ್ತು ಅದಕ್ಕೆ ಸಂಬಂದಕ್ಕಾಗಿ ಮಾದಿಗ ಸಮುದಾಯದ ಉಪ ಜಾತಿಗಳಿಗೆ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಡಿ. 16ರಂದು ಬೆಳಗಾವಿ ಸುವರ್ಣಸೌಧ ಎದುರು ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನಿಂದ ಸುಮಾರು 2 ಸಾವಿರ ಜನ ಭಾಗವಹಿಸಲಿದ್ದಾರೆ. ಆದ್ದರಿಂದ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕೆಂದು ಆಗ್ರಹಿಸಿದರು.ಮಲ್ಲೇಶಪ್ಪ ಮೆಣಸಿನಹಾಳ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಮೈಲಪ್ಪ ಗೋಣಿಬಸಮ್ಮನರ, ರಮೇಶ ಐರಣಿ, ವಿಜಯ ಮಾಳಗಿ, ಮಲ್ಲಿಕಾರ್ಜುನ ಮದಿಯಪ್ಪನವರ, ಹೊನ್ನಪ್ಪ ಯಲ್ಲಾಪುರ, ಧರ್ಮಣ್ಣ ಅಂತರವಳ್ಳಿ, ನವೀನ ನಿಖಿತ ಮೆಣಸಿನಹಾಳ, ಮಂಜುನಾಥ ಗಂಗಾಪುರ, ಹನುಮಂತ ವರವಜ್ಜಿ, ಗುತ್ತೆಪ್ಪ ಹರಿಜನ, ಲಕ್ಷ್ಮಣ ನಿಟ್ಟೂರು, ನಾಗರಾಜ ಪೂಜಾರ ಸೇರಿದಂತೆ ಮತ್ತಿತರು ಇದ್ದರು.