ಕಾಲೋನಿ ಕಾಳಗ
- ಆಮರಣಾಂತ ಉಪವಾಸ ನಂತರ ಜಿಲ್ಲಾಡಳಿತದಿಂದ ಪ್ರಕ್ರಿಯೆ ಚುರುಕು
- ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಇದಕ್ಕೆ ಒತ್ತಾಸೆ- ಪ್ರಭಾವಿಗಳು ಮಾಡಿಕೊಂಡಿರುವ ಒತ್ತುವರಿ
- ನಾಡಹಬ್ಬ ದಸರಾ ಮುಗಿದ ಬಳಿಕ ಎಲ್ಲದಕ್ಕೂ ಸೂಕ್ತ ಉತ್ತರ?
- ತಮಿಳು ಕಾಲೋನಿ ಸುತ್ತಲಿನ ಪ್ರಭಾವಿಗಳ ಒತ್ತುವರಿ ಕಟ್ಟಡಗಳಿಗೂ ಕುತ್ತು
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ತಮಿಳು ಕಾಲೋನಿ ತೆರವಿಗೆ ಒತ್ತಾಯಿಸಿ ಸೆ.೭ರಿಂದ ಆಮರಣಾಂತ ಉಪವಾಸ ಆರಂಭಿಸಿದ ನಂತರದಲ್ಲಿ ಜಿಲ್ಲಾಡಳಿತದಿಂದ ಪ್ರಕ್ರಿಯೆಗಳು ಚುರುಕುಗೊಂಡವು. ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರೂ ಕೂಡ ಇದಕ್ಕೆ ಒತ್ತಾಸೆಯಾಗಿ ನಿಂತರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಆಸ್ಪತ್ರೆ ಸ್ಥಾಪನೆಗೆ ಪ್ರಾಮುಖ್ಯತೆ ನೀಡಿ ಹಲವು ದಶಕಗಳ ವಿವಾದಕ್ಕೆ ಅಂತ್ಯವಾಡುವುದಕ್ಕೆ ನಿರ್ಧರಿಸಿದರು.
ಪ್ರಮುಖ ಘಟನಾವಳಿ:
೧೯೭೯ ರಿಂದ ೨೦೨೬ರವರೆಗೆ ತಮಿಳು ಕಾಲೋನಿಗೆ ಸಂಬಂಧಿಸಿದಂತೆ ನಡೆದ ಪ್ರಮುಖ ಘಟನಾವಳಿಗಳನ್ನು ಇಲ್ಲಿ ದಾಖಲಿಸಲಾಗಿದೆ.೧೧.೫.೧೯೭೯ ಮಂಡ್ಯ ನಗರದ ಪೂರ್ವಭಾಗದ ತಮಿಳು ಕಾಲೋನಿಯ ೫ ಎಕರೆ ೨೫ ಗುಂಟೆ ಪ್ರದೇಶ ಕೊಳಚೆ ಪ್ರದೇಶವೆಂದು ಘೋಷಣೆ, ೨೦೦೨-೦೩ರಲ್ಲಿ ವಾಂಬೆ ಯೋಜನೆಯಡಿ ೧೪೬ ಮನೆಗಳ ನಿರ್ಮಾಣ. ೨೦೦೮ರಲ್ಲಿ ತಮಿಳು ಕಾಲೋನಿ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ, ಹಲವು ಮೆಗಳು ಆಹುತಿ. ೨೦೦೯ರಲ್ಲಿ ಕೊಳಚೆ ಪ್ರದೇಶದ ಪಕ್ಕದ ೨ ಎಕರೆ ೩೩ ಗುಂಟೆ ಪ್ರದೇಶ ವಸತಿ ಯೋಜನೆಗಾಗಿ ಮಂಡಳಿಗೆ ಹಸ್ತಾಂತರ. ಐಎಚ್‌ಎಸ್‌ಡಿಪಿ ಯೋಜನೆಯಡಿ ೩೭೮ ಮನೆಗಳನ್ನು ನಿರ್ಮಿಸಲು ಮೂರು ಪ್ಯಾಕೇಜ್‌ಗಳಡಿ ಕಾರ್ಯಾದೇಶ ನೀಡಿ ಕಾಮಗಾರಿ ಆರಂಭ. ೨೦೧೦ರಲ್ಲಿ ಬಿ.ಟಿ.ರವೀಂದ್ರಕುಮಾರ್ ಮತ್ತಿತರರು ೨ ಎಕರೆ ೩೩ ಗುಂಟೆ ಜಮೀನಿನ ಹಸ್ತಾಂತ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. ಕಾಮಗಾರಿ ಮುಂದುವರೆಸದಂತೆ ತಡೆಯಾಜ್ಞೆ. ೨೦೧೫ರಲ್ಲಿ ತಮಿಳು ಕಾಲೋನಿ ಕೊಳಚೆ ಪ್ರದೇಶವನ್ನು ಸ್ಥಳಾಂತರಿಸಲು ನ್ಯಾಯಾಲಯದಿಂದ ಆದೇಶ.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಕೇಂದ್ರ ಕಚೇರಿಯಿಂದ ತಮಿಳು ಕಾಲೋನಿ ನಿವಾಸಿಗಳ ಪುನರ್ ವಸತಿಗಾಗಿ ೬ ರಿಂದ ೮ ಎಕರೆ ಜಮೀನು ಕೋರಿ ಪತ್ರ. ಫಲಾನುಭವಿಗಳ ಪಟ್ಟಿ ಪರಿಶೀಲನೆ, ನಿವಾಸಿಗಳಿಂದ ವಿರೋಧ. ೨೦೧೬ರಲ್ಲಿ ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರಕ್ಕೆ ರಾಜೀವ್ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಮಂಡ್ಯ ನಗರದ ಸರ್ವೆ ನಂ. ೫೦೭ರ ೬ ಎಕರೆ ಜಮೀನು ಮಂಡಳಿಗೆ ಹಸ್ತಾಂತರ. ೧೨ ಎಕರೆ ಜಮೀನು ಹಸ್ತಾಂತ ಪ್ರಕ್ರಿಯೆಗೆ ತಡೆಯಾಜ್ಞೆ.ಹಾಲಹಳ್ಳಿಯಲ್ಲಿ ಜಿ-ಪ್ಲಸ್ ೩ ಮಾದರಿಯ ೧೩೩೫ ಮನೆಗಳ ಬದಲಾಗಿ ಮೂರು ಸ್ಥಳಗಳಲ್ಲಿ ಜಿ-ಪ್ಲಸ್ ೧ ಮತ್ತು ಜಿ-ಪ್ಲಸ್ ೨ ಮಾದರಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ. ೨೦೧೮ರಲ್ಲಿ ಸರ್ವೇ ನಂ. ೫೦೭ರ ೬ ಎಕರೆ ಜಮೀನಿನಲ್ಲಿ ೫೭೫ ಜಿ-ಪ್ಲಸ್ ೩ ಮಾದರಿಯ ಮನೆಗಳ ನಿರ್ಮಾಣಕ್ಕೆ ಬಡಾವಣೆ ನಕ್ಷೆ ಅನುಮೋದನೆಗೆ ಮನವಿ. ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರಿಸುವ ಸಲುವಾಗಿ ನಿರ್ಮಿಸುತ್ತಿರುವ ೫೭೫ ಮನೆಗಳ ಕಾಮಗಾರಿ ಪೂರ್ಣಕ್ಕೆ ಹೈಕೋರ್ಟ್ ಒಂದೂವರೆ ವರ್ಷ ಕಾಲಾವಕಾಶ ನೀಡಿ ಆದೇಶ.
೨೦೨೩ರಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಲು ನಗರಸಭೆ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದಾಗ ತಮಿಳು ಕಾಲೋನಿ ನಿವಾಸಿಗಳಿಂದ ತೀವ್ರ ವಿರೋಧ. ಜಿಲ್ಲಾಧಿಕಾರಿಗಲ ಮನವೊಲಿಕೆ ಯತ್ನ ವಿಫಲ. ೨೦೨೩ರಲ್ಲಿ ಸುಶೀಲಮ್ಮ ಮತ್ತಿತರರು ನಿವಾಸಿಗಳನ್ನು ಸ್ಥಳಾಂತರಿದಂತೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ. ೨೦೨೪ರಲ್ಲಿ ತಮಿಳು ಕಾಲೋನಿ ನಿವಾಸಿಗಳ ಜೊತೆ ಸಭೆ, ಚಿಕ್ಕಮಂಡ್ಯದಲ್ಲಿ ನಿರ್ಮಿಸಿರುವ ಮನೆಗಳಿಗೆ ತೆರಳುವಂತೆ ಮನವಿ, ನಿವಾಸಿಗಳ ತೀವ್ರ ವಿರೋಧ.೨೦೨೫ರಲ್ಲಿ ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರಿಸಲು ಮಿಮ್ಸ್‌ನಿಂದ ಹೈಕೋರ್ಟ್‌ಗೆ ದಾವೆ. ಫಲಾನುಭವಿಗಳ ಪಟ್ಟಿ ತಯಾರಿಸಲು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಮಿಳು ಕಾಲೋನಿಗೆ ಭೇಟಿ. ನಿವಾಸಿಗಳ ಅಸಹಕಾರ, ತೀವ್ರ ವಿರೋಧ. ೨೦೨೬ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಮಿಳು ಕಾಲೋನಿ ನಿವಾಸಿಗಳೊಂದಿಗೆ ಸಭೆ ನಡೆಸಿ ಫಲಾನುವಿಗಳ ಸರ್ವೆ ಕಾರ್ಯಕ್ಕೆ ಅವಕಾಶ ನೀಡುವಂತೆ ಸೂಚನೆ. ಆದರೂ ತಮಿಳು ಕಾಲೋನಿ ನಿವಾಸಿಗಳ ಅಸಹಕಾರ, ವಿರೋಧ.
ಅಂತಿಮವಾಗಿ ಸಾಮಾಜಿಕ ಹೋರಾಗಾರ ಕೆ.ಆರ್.ರವೀಂದ್ರ ತಮಿಳು ಕಾಲೋನಿ ನಿವಾಸಿಗಳ ತೆರವಿಗೆ ಆಗ್ರಹಿಸಿ ಜಿಲ್ಲಾಡಳಿತದ ವಿರುದ್ಧ ಆಮರಣಾಂತ ಉಪವಾಸ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಮಧ್ಯಪ್ರವೇಶ. ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ, ಆಮರಣಾಂತ ಉಪವಾಸ ಕೈಬಿಡುವಂತೆ ಮನವಿ. ಉಪವಾಸ ಕೈಬಿಡಲು ಕೆ.ಆರ್.ರವೀಂದ್ರ ಒಪ್ಪಿಗೆ. ಉಚ್ಛ ನ್ಯಾಯಾಲಯಕ್ಕೆ ಮಂಡಳಿಯಿಂದ ಅಡ್ವಾನ್ಸ್ ಅಪ್ಲಿಕೇಷನ್ ಸಲ್ಲಿಸಲಾಗಿದೆ.