ಹೊನ್ನಾವರದ ಗೋಹತ್ಯೆ ಪ್ರಕರಣಕ್ಕೆ ತಂಜೀಂ ಸಂಘಟನೆ ಖಂಡನೆ

KannadaprabhaNewsNetwork | Published : Jan 31, 2025 12:49 AM

ಸಾರಾಂಶ

ಕಳ್ಳತನ ಮಾಡಿ ಮಾಂಸ ಕೊಡುತ್ತಾರೆ ಎನ್ನುವ ಕಾರಣಕ್ಕೆ ನಾವು ಒಂದು ತಿಂಗಳು ಇಂತಹ ಮಾಂಸ ಖರೀದಿಯನ್ನೇ ಬಂದ್ ಮಾಡಿದ್ದೆವು ಎಂದು ತಂಜೀಂ ಸಂಘಟನೆ ಅಧ್ಯಕ್ಷ ‌ಇನಾಯಿತ್ ಉಲ್ಲಾ ಶಾಬಂದ್ರಿ ತಿಳಿಸಿದರು.

ಕಾರವಾರ: ಹೊನ್ನಾವರದಲ್ಲಿ ನಡೆದ ಗೋಹತ್ಯೆ ಪ್ರಕರಣವನ್ನು ಇಡೀ ಸಮಾಜದ ಪರವಾಗಿ ಖಂಡಿಸುತ್ತೇವೆ. ಗೋಹತ್ಯೆ ಪ್ರಕರಣದಲ್ಲಿ ಭಟ್ಕಳದ ಹೆಸರು ಬರುತ್ತಿದೆ.‌ ಗೋಹತ್ಯೆ ಮಾಡಿದವರನ್ನು ಭಟ್ಕಳದವರು ಒಪ್ಪುವುದಿಲ್ಲ ಎಂದು ತಂಜೀಂ ಸಂಘಟನೆ ಅಧ್ಯಕ್ಷ ‌ಇನಾಯಿತ್ ಉಲ್ಲಾ ಶಾಬಂದ್ರಿ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳ್ಳತನ ಮಾಡಿ ಮಾಂಸ ಕೊಡುತ್ತಾರೆ ಎನ್ನುವ ಕಾರಣಕ್ಕೆ ನಾವು ಒಂದು ತಿಂಗಳು ಇಂತಹ ಮಾಂಸ ಖರೀದಿಯನ್ನೇ ಬಂದ್ ಮಾಡಿದ್ದೆವು.‌ ಈ ಹಿಂದೆಯೇ ರಿಯಾಜ್ ಭಟ್ಕಳ ಎಂದು ಭಟ್ಕಳದ ಹೆಸರು ಸೇರಿಸಿ ಭಟ್ಕಳದ ಹೆಸರು ಹಾಳು ಮಾಡಲಾಗಿತ್ತು. ಈಗ ಭಟ್ಕಳದ ಹೆಸರು ಚೆನ್ನಾಗಿದೆ. ಆದರೆ ಗೋಹತ್ಯೆ ಮಾಡಿದ ಪ್ರಕರಣದಲ್ಲಿ ಭಟ್ಕಳದ ಹೆಸರು ತಂದಿರುವುದು ಬೇಸರ ತಂದಿದೆ ಎಂದರು.ನ್ಯಾಯವಾದಿ ಇಮ್ರಾನ್ ಲಂಕ, ಜಿಲ್ಲೆಯಲ್ಲಿ ಗೋ ಹತ್ಯೆ, ಗೋ ಮಾಂಸ‌ ಸಾಗಾಟ ಮಾಡುವವರು ಒಂದೇ ಸಮಾಜದವರಿಲ್ಲ. ಎಲ್ಲ ಸಮಾಜದವರ ಹೆಸರು ಪೊಲೀಸ್ ಪಟ್ಟಿಯಲ್ಲಿದೆ. ಯಾರೇ ಗೋಹತ್ಯೆ, ಗೋ ಕಳ್ಳತನ ಮಾಡಿದರೆ ನಾವು ಒಪ್ಪುವುದಿಲ್ಲ. ಭಟ್ಕಳದಲ್ಲಿ ಗೋ ಕಳ್ಳತನ, ಗೋಹತ್ಯೆ ಪ್ರಕರಣ ಬಂದಾಗ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದೇವೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶ ನಮ್ಮದಾಗಿದೆ ಎಂದರು.ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಯಾವುದೆ ವಿಷಯವಾದರೂ ರಾಜಕೀಯಪ್ರೇರಿತ ಆಗಬಾರದು. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದ ಅವರು, ಹೊನ್ನಾವರ ಪ್ರಕರಣದಲ್ಲಿ ಪೊಲೀಸರು ಗುಂಡು ಹಾರಿಸಿದ ಬಗ್ಗೆ ಕೇಳಿದಾಗ ಎರಡೂ ಘಟನೆ ಆಗಬಾರದಿತ್ತು. ಕೇವಲ ರಾಜಕೀಯ ಎಂದಷ್ಟೆ ಹೇಳಿದರು.ಪರೇಶ್ ಮೇಸ್ತಾ ಪ್ರಕರಣದಲ್ಲಿ ಜಾತಿ ಧರ್ಮ‌ ಇಟ್ಟುಕೊಂಡು ರಾಜಕಾರಣ ಮಾಡಿದ್ದರು. ಈಗ ಅದೇ ರೀತಿ ರಾಜಕೀಯ ಮಾಡಲು ಕೆಲವರು ಪ್ರಯತ್ನ ಮಾಡಿದ್ದರು. ಆದರೆ ಜನರು ಇದಕ್ಕೆ ಸ್ಪಂದಿಸಿಲ್ಲ. ಈ ಪ್ರಕರಣದಲ್ಲಿ ಬೇರೆ ಕೋಮಿನವರು ಇದ್ದು, ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದರು.ಲಘು ಮಾತು ಸರಿಯಲ್ಲ

ಹೊನ್ನಾವರ ಗೋಹತ್ಯೆ ಪ್ರಕರಣದಲ್ಲಿ ಕೆಲವರು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನ ಮಾಡಿದರು.‌ ಆದರೆ ಜನರು ಬುದ್ಧಿವಂತರಾಗಿದ್ದಾರೆ. ಶಾಸಕ ದಿನಕರ ಶೆಟ್ಟಿ ಅವರು ಸಚಿವರು, ಸಿಎಂ, ಗೃಹ ಸಚಿವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಮ್ಮ ಖಂಡನೆಯಿದೆ. ಅವರ ಸರ್ಕಾರದ ಅವಧಿಯಲ್ಲಿ ಏನು ಮಾಡಿದ್ದರು ಎಂದು ಹೇಳಲಿ ಎಂದು ಇನಾಯಿತ್ ಸವಾಲು ಹಾಕಿದರು.

Share this article