ಗಂಗಾವಳಿ ನದಿಯಲ್ಲಿ ಟ್ಯಾಂಕರ್ ಎಂಜಿನ್, ಸ್ಕೂಟಿ ಪತ್ತೆ

KannadaprabhaNewsNetwork | Published : Sep 23, 2024 1:19 AM

ಸಾರಾಂಶ

ಮುಳುಗು ಪರಿಣತ ಈಶ್ವರ್ ಮಲ್ಪೆ ನೀರಿನ ಆಳಕ್ಕೆ ಹೋಗಿ ಎಂಜಿನ್ ಹಾಗೂ ಬೈಕ್ ಪತ್ತೆ ಹಚ್ಚಿದ್ದಲ್ಲದೆ ಅದರ ಸುತ್ತ ಹಗ್ಗ ಕಟ್ಟಿ ಬಂದಿದ್ದರು. ಇದರ ಸಹಾಯದಿಂದ ಅವೆರಡನ್ನು ಸರಾಗವಾಗಿ ಎಳೆಯಲು ಸಹಕಾರಿಯಾಯಿತು.

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಸತತ ಮೂರನೆಯ ದಿನವೂ ಶೋಧ ಕಾರ್ಯ ನಡೆದಿದ್ದು, ನದಿಯ ಆಳದಲ್ಲಿ ಟ್ಯಾಂಕರ್‌ನ ಎಂಜಿನ್ ಹಾಗೂ ಒಂದು ದ್ವಿಚಕ್ರ ವಾಹನ ದೊರೆತಿದೆ. ಈ ದ್ವಿಚಕ್ರ ವಾಹನ ಹೆದ್ದಾರಿ ಪಕ್ಕದ ಹೋಟೆಲ್ ಮಾಲೀಕ ಲಕ್ಷ್ಮಣ ನಾಯ್ಕ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಮುಳುಗು ಪರಿಣತ ಈಶ್ವರ್ ಮಲ್ಪೆ ನೀರಿನ ಆಳಕ್ಕೆ ಹೋಗಿ ಎಂಜಿನ್ ಹಾಗೂ ಬೈಕ್ ಪತ್ತೆ ಹಚ್ಚಿದ್ದಲ್ಲದೆ ಅದರ ಸುತ್ತ ಹಗ್ಗ ಕಟ್ಟಿ ಬಂದಿದ್ದರು. ಇದರ ಸಹಾಯದಿಂದ ಅವೆರಡನ್ನು ಸರಾಗವಾಗಿ ಎಳೆಯಲು ಸಹಕಾರಿಯಾಯಿತು.ಆರಂಭದಲ್ಲೇ ದೊರೆತ ಪಾತ್ರೆಗಳು:

ಕಾರ್ಯಾಚರಣೆ ಸಂದರ್ಭದಲ್ಲಿ ಲಕ್ಷ್ಮಣ ಅವರ ಹೋಟೆಲಿನಲ್ಲಿದ್ದ ಕೆಲವು ಪಾತ್ರೆಗಳು ಸಿಕ್ಕಿದ್ದು, ಅವು ಅದೇ ಹೋಟೆಲಿನದ್ದು ಎಂದು ಖಾತ್ರಿಪಡಿಸಲಾಗಿದೆ.

ಜಿಲ್ಲಾಡಳಿತದಿಂದ ಸಹಕಾರ ಸಿಗುತ್ತಿಲ್ಲ: ಈಶ್ವರ ಮಲ್ಪೆ

ಶಿರೂರು ಗುಡ್ಡ ಕುಸಿತವಾದ ದಿನದಿಂದ ಇಲ್ಲಿಯವರೆಗೆ ಈಶ್ವರ್ ಮಲ್ಪೆ ಕಾರ್ಯಾಚರಣೆಗೆ ಅನೆಬಲ ತುಂಬಿದ್ದರು. ಸುರಿವ ಮಳೆ, ರಭಸದ ನದಿಯ ಒಳಹರಿವು, ನೀರಿನೊಳಗೆ ಕಣ್ಣು ಬಿಡಲು ಆಗದ ಪರಿಸ್ಥಿತಿಯಲ್ಲೂ ಅವರು ಕಾರ್ಯಾಚರಣೆ ನಡೆಸಿದ್ದರು. ಅದೇ ರೀತಿ ಪ್ರಸ್ತುತ 3ನೇ ಹಂತದ ಕಾರ್ಯಾಚರಣೆಯಲ್ಲೂ ಅವರು ಉತ್ತಮ ಸಹಕಾರ ನೀಡಿದ್ದರು. ಆದರೆ ಈಗ ಕಾರ್ಯಾಚರಣೆಯ ಕೊನೆಯ ಹಂತಕ್ಕೆ ತಲುಪಿದ್ದು, ಅವಶೇಷಗಳು ಸಿಗುವ ಮುಖ್ಯ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲು ಅನುಮತಿ ಕೊಡುತ್ತಿಲ್ಲ. ಗೋವಾದ ತಜ್ಞರ ತಂಡದ ಜತೆ ನೀರಿನಲ್ಲಿ ಅವಶೇಷಗಳನ್ನು ಸೆರೆ ಹಿಡಿಯುವ ಕ್ಯಾಮೆರಾ ಮುಖಾಂತರ ಅವರಿಗೆ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗಿದೆ. ನನ್ನ ಅವಶ್ಯಕತೆಯಿಲ್ಲ ಎಂದು ಹೇಳಿದ್ದರೆ ನಾನು ಮೊದಲೆ ವಾಪಸ್ ಹೋಗುತ್ತಿದ್ದೆ. ಇಲಾಖೆ ಕ್ರೆಡಿಟ್ ತೆಗೆದುಕೊಳ್ಳುವ ಸಲುವಾಗಿ ನಮ್ಮನ್ನು ಬದಿಗೆ ಮಾಡಲಾಗಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ಬೇಸರ ಹೊರಹಾಕಿದರು. ಕಾರ್ಯಾಚರಣೆಗೆ ಬರುವುದಿಲ್ಲ ಎಂಬ ಸಂದೇಶವನ್ನು ಸ್ವತಃ ಅವರೇ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ.ಈಗಾಗಲೇ ಮಾನವೀಯತೆಯ ದೃಷ್ಟಿಯಿಂದ ಜಗನ್ನಾಥ, ಅರ್ಜುನ ಹಾಗೂ ಲೋಕೇಶ ಅವರ ಕುಟುಂಬಕ್ಕೆ ಮೂವರ ಶವ ಹುಡುಕಿ ಕೊಡುವುದಾಗಿ ಮಾತು ಕೊಟ್ಟಿದ್ದೆ. ಅದೇ ರೀತಿ ನದಿಯಲ್ಲಿ ಶವಗಳು ಇರಬಹುದೆಂದು ಗುರುತಿಸಿದ ಸ್ಥಳದಲ್ಲಿ ಹುಡುಕಲು ಸಿದ್ಧತೆ ಮಾಡಿಕೊಂಡಿದ್ದೆ. ಅದರೆ ಇಲಾಖೆಯ ಈ ನಿರ್ಧಾರದಿಂದಾಗಿ ನನ್ನ ಕಾರ್ಯಾಚರಣೆಗೆ ತೊಡಕಾಗಿದ್ದು, ಬೇಸರವಾಗಿದೆ ಎಂದು ನೋವನ್ನು ಹೊರಹಾಕಿದರು.ಈ ವಿದ್ಯಮಾನಗಳನ್ನು ಗಮನಿಸಿದರೆ ಇನ್ನು ಕೆಲವೇ ಸಮಯದಲ್ಲಿ ಕಾರ್ಯಾಚರಣೆ ಪ್ರಮುಖ ಹಂತಕ್ಕೆ ತಲುಪುವುದು ದೃಢವಾದಂತಾಗಿದೆ.

Share this article