ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ

KannadaprabhaNewsNetwork |  
Published : Jul 16, 2026, 03:15 AM IST
14ಕೆಪಿಎಲ್5:ಕುಕನೂರು ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ಬೆಳೆಗೆ ನೀರು ಹಾಕುತ್ತಿರುವುದು.  | Kannada Prabha

ಸಾರಾಂಶ

ಒಂದು ಎಕರೆಗೆ 5 ಟ್ಯಾಂಕರ್ ನೀರು ಅವಶ್ಯವಾಗಿದ್ದು, ಒಂದು ಟ್ಯಾಂಕರ್ ನೀರಿಗೆ ಬಾಡಿಗೆ ₹500 ಆಗುತ್ತದೆ

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಅಯ್ಯೋ ಶಿವನೇ, ಬಿತ್ತಿದ ಬೆಳೆ ಬಿಸಲಿನ ತಾಪಕ್ಕೆ ಮುದುಡಿ ಹೋಗ್ಯಾವು, ಪೂರ್ತಿ ಒಣಗಿ ಹೋದ್ರ ಮಾಡಿದ್ ಖರ್ಚು ಸಹ ಮಣ್ಣು ಪಾಲಾಕ್ತೈತಿ ನೋಡ್ರೀ, ಕಡಿಗೆ ಸದ್ಯಕ್ಕ ಬೆಳಿಗೆ ಜೀವ ಉಳಿಸಿಕೊಳ್ಳುವಷ್ಟಾದ್ರು ತಂಪಾದ್ರಾ, ಮುಂದಿನ ವಾರ ಮಳೆರಾಯ ಆದ್ರ ಆಗ್ಬಹುದು ಎಂಬ ನಂಬಿಕೆಯಿಂದ ನೀಲನಗೌಡ ಮಾಲಿ ಪಾಟೀಲ್ ಬೆಳೆ ಉಳಿಸಿಕೊಳ್ಳಲು ತಾವು ಪಡುತ್ತಿರುವ ಪರಿಪಾಟಿಲು ಬಿಚ್ಚಿಟ್ಟರು.

ತಾಲೂಕಿನ ತಳಕಲ್ಲ ಗ್ರಾಮದ ತಮ್ಮ ಜಮೀನಿನಲ್ಲಿ ಸುಮಾರು 20 ಎಕರೆಯಷ್ಟು ತೊಗರಿ ಬಿತ್ತಿರುವ ಅವರು, ಹೊಲದಲ್ಲಿ ಮಳೆ ಅಭಾವದಿಂದ ಬೆಳೆ ಬಾಡುತ್ತಿರುವುದು ಕಂಡು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದು ಕಂಡು ಬಂದಿತು.

ಒಂದು ಎಕರೆಗೆ 5 ಟ್ಯಾಂಕರ್ ನೀರು ಅವಶ್ಯವಾಗಿದ್ದು, ಒಂದು ಟ್ಯಾಂಕರ್ ನೀರಿಗೆ ಬಾಡಿಗೆ ₹500 ಆಗುತ್ತದೆ. ಎಕರೆಗೆ ಐದು ಟ್ಯಾಂಕರ್ ಅಂದರೆ 2500 ಖರ್ಚಾಗುತ್ತದೆ. ಒಣಗುತ್ತಿರುವ ಬೆಳೆಗೆ ಜೀವ ಉಳಿಸುವುದಕ್ಕೆ ದುಬಾರಿ ಟ್ಯಾಂಕರ್ ಮೂಲಕ ನೀರು ಹಾಕಲು ಮುಂದಾಗಿದ್ದಾರೆ.

ಈಗಾಗಲೇ ಎಕರೆಗೆ ₹700 ರಿಂದ 800 ರೂಪಾಯಿಯ ತೊಗರೆ ಬೀಜ ಹಾಕಿ, ಕಳೆ ತಗೆಸಿ, ಉಳುಮೆ ಮಾಡಿ ಹೈರಾಣಾಗಿದ್ದಾರೆ. ಒಂದು ವೇಳೆ ಬೆಳೆ ಹೀಗೆ ಬಿಟ್ಟರೆ ಬಾಡಿ ಹೋದರೆ, ಇಷ್ಟು ದಿನ ಮಾಡಿರುವ ಶ್ರಮ ವ್ಯರ್ಥ ಆಗುತ್ತದೆ ಎಂದು ತಮ್ಮ ಸ್ವಂತ ಟ್ರ್ಯಾಕ್ಟರ್ ಜತೆಗೆ ಮತ್ತೊಂದು ಟ್ಯಾಕ್ಟರ್ ಬಾಡಿಗೆ ಪಡೆದು ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದಾರೆ.

ಬೇಸಿಗೆ ಬಿಸಿಲು:ಸದ್ಯ ಇದು ಮುಂಗಾರು ಹಂಗಾಮಿನ ಮಳೆಗಾಲದ ದಿನಗಳಾದರೂ ಬಿಸಲ ರಂಗು ಬೇಸಿಗೆ ಬಿಸಿಲಂತೆ ಇರುವುದು ಕಂಡು ಬರುತ್ತಿದೆ. ಇದರಿಂದ ಭೂಮಿ ತೇವಾಂಶ ಹಾಗೂ ತೇವಾಂಶ ಕೊರತೆಯಿರುವ ಬೆಳೆಗಳು ಬಾಡತೊಡಗಿವೆ. ಕೆಲವು ಬೆಳೆಗಳು ಮಳೆ ಅಭಾವದಿಂದ ನೆಲ ಬಿಟ್ಟೇ ಮೆಲೆಕ್ಕೇದ್ದಿಲ್ಲ.

ಬೀಗಡಾಯಿಸಿ ಬರದ ಛಾಯೆ:ಒಂದು ಕಡೆ ದುಬಾರಿ ಖರ್ಚು ಮಾಡಿಕೊಂಡು ಬೆಳೆಗಳಿಗೆ ಟ್ಯಾಂಕರ್ ನೀರು ಹಾಕಿ ಬೆಳೆ ಉಳಿಸಿಕೊಳ್ಳಲು ರೈತ ಮುಂದಾಗಿದ್ದರೆ ಇನ್ನೊಂದೆಡೆ ಬಿತ್ತಿದ ಬೆಳೆಗಳನ್ನು ಹರಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಬರದ ಛಾಯೆ ಕರಿ ಮೋಡದಿಂದ ಮಳೆ ಬಾರದೆ ಮತ್ತಷ್ಟು ದಟ್ಟವಾಗಿದೆ. ಬೇಸಿಗೆಯ ಬಿಸಿಲ ತಾಪ ಕಂಡು ಬರುತ್ತಿದೆ. ಟ್ಯಾಂಕರ್ ನೀರು ಹಾಕಿದರೂ ಅದು ಬಿಸಿಲ ಝಳಕ್ಕೆ ಭೂಮಿಯಲ್ಲಿ ತೇವಾಂಶ ಉಳಿಯದಂತೆ ಆಗುತ್ತಿದೆ. ಆದರೆ ರೈತ ಮಾತ್ರ ಬಿತ್ತುವುದು ಹಾಗೂ ಬೆಳೆ ಉಳಿಸಿಕೊಳ್ಳುವುದು ಬಿಡುತ್ತಿಲ್ಲ.

ಮಳೆ ಇಲ್ಲ. ಬೆಳೆ ಒಣಗುತ್ತಿವೆ. ಬೆಳೆ ಉಳಿಸಿಕೊಳ್ಳಬೇಕು ಎಂದು ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದೇವೆ. ಈಗಾಗಲೇ ಬಿತ್ತನೆ ಕಾರ್ಯಕ್ಕೆ ಖರ್ಚು ಮಾಡಿದ್ದೇವೆ. ಸದ್ಯ ಬೆಳೆ ಉಳಿಸಿಕೊಳ್ಳಲು ಸಹ ಟ್ಯಾಂಕರ್ ಮೂಲಕ ನೀರು ತಂದು ಭೂಮಿಯ ಬೆಳೆ ಸಾಲುಗಳಿಗೆ ಹಾಕುತ್ತಿದ್ದೇವೆ ಎಂದು ತಳಕಲ್ಲ ಗ್ರಾಮದ ರೈತ ನೀಲನಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಳುವಾಯಿ ಘಟಕಕ್ಕೆ ಮುರಳಿಧರ್ ಎಸ್. ಅಧ್ಯಕ್ಷರಾಗಿ ಆಯ್ಕೆ
ಪಂಚವರ್ಣಕ್ಕೆ ಹಸಿರು ರಥ ಹಸ್ತಾಂತರ