ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ನ 2025- 26 ನೇ ಸಾಲಿನ ಅಧ್ಯಕ್ಷರಾಗಿ ತನ್ಮಯಿ ಪ್ರವೀಣ್ ಹಾಗು ಕಾರ್ಯದರ್ಶಿಯಾಗಿ ಸುವಿನಾ ಕೃಪಾಲ್ ಆಯ್ಕೆಯಾದರು.ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ಬುಧವಾರ ನಡೆದ ಪದಗ್ರಹಣ ಸಮಾರಂಭದಲ್ಲಿ 318-ಜಿಲ್ಲಾ ಮಾಜಿ ಅಧ್ಯಕ್ಷೆ ನೈನಾ ಅಚ್ಚಪ್ಪ ನೂತನ ಆಡಳಿತ ಮಂಡಳಿಯವರಿಗೆ ಪ್ರಮಾಣ ವಚನ ಬೋಧಿಸಿದರು. ಉಪಾಧ್ಯಕ್ಷರಾಗಿ ಲತಾ ಮಂಜು, ಖಜಾಂಚಿ ಆಶಾ ಮೋಹನ್, ಐಎಸ್‌ಒ ನಂದಿನಿ ಗೋಪಾಲ್, ಸಂಪಾದಕಿ ಅಮ್ರಿತಾ ಕಿರಣ್, ಸದಸ್ಯರಾಗಿ ಭಾರ್ಗವಿ ಶ್ರೀಕೇಶ್, ಸ್ಮಿತಾ ನವೀನ್, ವನಿತಾ ಜಯರಾಮ್ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.ನೈನಾ ಅಚ್ಚಪ್ಪ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಪ್ರಪಂಚದ ಅತೀದೊಡ್ಡ ಮಹಿಳಾ ಸಂಸ್ಥೆ ಇನ್ನರ್‌ವ್ಹೀಲ್ ಆಗಿದೆ. ಇದು ಸೇವೆ ಮತ್ತು ಸ್ನೇಹದ ಆಧಾರದಲ್ಲಿ ಕೆಲಸ ಮಾಡುತ್ತದೆ. ಈ ಕ್ಲಬ್ ಅನೇಕ ದೇಶಗಳಲ್ಲಿ ವಿವಿಧ ಸಾಮಾಜಿಕ ಮತ್ತು ದತ್ತಿ ಕಾರ್ಯಗಳನ್ನು ಮಾಡುತ್ತದೆ ಎಂದು ಹೇಳಿದರು.ಸೋಮವಾರಪೇಟೆ ಗೋಲ್ಡ್ನ ಅಧ್ಯಕ್ಷೆ ತನ್ಮಯಿ ಪ್ರವೀಣ್ ಮಾತನಾಡಿ, ಈ ಕ್ಲಬ್ ಆರೋಗ್ಯ, ಶಿಕ್ಷಣ, ಪರಿಸರ, ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೇವೆಗಳನ್ನು ಮಾಡುತ್ತಿದೆ. ಹಿಂದಿನ ಆಡಳಿತ ಮಂಡಳಿಯವರು ಅತ್ಯುತ್ತಮ ಜನಪರ ಕೆಲಸಗಳನ್ನು ಮಾಡಿದ್ದಾರೆ. ಮಾಜಿ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರ ಸಹಕಾರ ಪಡೆದು ಉತ್ತಮ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಅಂಗವಿಕಲ ವಿದ್ಯಾರ್ಥಿಗೆ ವ್ಹೀಲ್ ಚೇರ್ ಹಾಗೂ ಮಗುವಿಗೆ ವಾಟರ್‌ಬೆಡ್ ವಿತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷೆ ವೀಣಾ ಮನೋಹರ್ ಕ್ಲಬ್‌ನ ಬುಲೆಟಿನ್ ಶಖಿ ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ಕ್ಲಬ್‌ನ ಜಿಲ್ಲಾ ಕಾರ್ಯದರ್ಶಿ ಉಮಾ ಮಹೇಶ್, ಸೋಮವಾರಪೇಟೆ ಕ್ಲಬ್‌ನ ಮಾಜಿ ಅಧ್ಯಕ್ಷೆ ಸಂಗೀತಾ ದಿನೇಶ್, ಕಾರ್ಯದರ್ಶಿ ಸುಮಲತಾ ಪುರುಷೋತ್ತಮ್, ಮಾಜಿ ಎಡಿಟರ್ ಸರಿತಾ ರಾಜೀವ್, ಅಮ್ರಿತಾ ಕಿರಣ್, ಅನಿತಾ ಶುಭಾಕರ್ ಇದ್ದರು.