ದಕ್ಷಿಣ ಭಾರತದ ಕುಂಭಮೇಳವಾದ ತರಳಬಾಳು ಹುಣ್ಣಿಮೆ

KannadaprabhaNewsNetwork |  
Published : Mar 01, 2025, 01:02 AM IST
ಚಿತ್ರ:ಭರಮಸಾಗರದಲ್ಲಿ ಏರ್ಪಡಿಸಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ತರಳಬಾಳು ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಭರಮಸಾಗರದಲ್ಲಿ ಏರ್ಪಡಿಸಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ತರಳಬಾಳು ಶ್ರೀಗಳು ಮಾತನಾಡಿದರು.

ಕಾರ್ಯಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ತರಳಬಾಳು ಶ್ರೀ ಪ್ರಶಂಸೆಕನ್ನಡಪ್ರಭ ವಾರ್ತೆ ಸಿರಿಗೆರೆ

ಭರಮಸಾಗರದಲ್ಲಿ 9 ದಿನಗಳ ಕಾಲ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕರ್ತರೆಲ್ಲರ ಶ್ರಮದಿಂದಾಗಿ ದಕ್ಷಿಣ ಭಾರತದ ಕುಂಭಮೇಳವಾಗಿ ಪರಿಣಮಿಸಿತ್ತು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಭರಮಸಾಗರದ ಎಬಿಟಿ ಕಲ್ಯಾಣ ಮಂಟಪದಲ್ಲಿ ತರಳಬಾಳು ಹುಣ್ಣಿಮೆಯ ಯಶಸ್ವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಹುಣ್ಣಿಮೆಯ 9 ದಿನಗಳು 9 ಶಿವರಾತ್ರಿಗೆ ಸಮನಾಗಿವೆ. ಈ ಭಾಗದ ಎಲ್ಲಾ ಸಮುದಾಯದ ಕಾರ್ಯಕರ್ತರು ಒಮ್ಮನಿಸಿನಿಂದ ಹುಣ್ಣಿಮೆ ಮಹೋತ್ಸವದ ಯಶಸ್ಸಿಗೆ ಕೆಲಸ ಮಾಡಿದ್ದಾರೆ. ನಮ್ಮ ಕವಿಗಳು ಬಣ್ಣಿಸುವಂತೆ ತರಳಬಾಳು ಹುಣ್ಣಿಮೆ ಮಹೋತ್ಸವ ಸರ್ವ ಜನಾಂಗದ ಶಾಂತಿಯ ತೋಟವಾಗಿ ಮುಕ್ತಾಯವಾಗಿದೆ ಎಂದರು.

ಭರಮಸಾಗರದ ಐತಿಹಾಸಿಕ ಕೆರೆಗೆ ನೀರು ತುಂಬಿ ಸುತ್ತಲ 43 ಕೆರೆಗಳು ಒಡಲು ಹಸಿರಿನಿಂದ ಕಂಗೊಳಿಸುತ್ತಿದೆ. ಬರಗಾಲದ ಹಣೆಪಟ್ಟಿ ಕಳಚಿ ಇನ್ನು ಮುಂದೆ ಭರಮಸಾಗರವು ಮಲೆನಾಡಿಗಿಂತ ಕಡಿಮೆ ಇಲ್ಲದಂತೆ ರೂಪುಗೊಳ್ಳುತ್ತದೆ ಎಂದರು.

ಭರಮಸಾಗರ ಏತನೀರಾವರಿ ಯೋಜನೆಯು ಅತ್ಯಂತ ಯಶಸ್ವಿಯಾದ ಯೋಜನೆಯಾಗಿದೆ. ಇದನ್ನು ಮಾದರಿಯನ್ನಾಗಿಟ್ಟುಕೊಂಡು ರಾಜ್ಯದ ಎಲ್ಲಾ ಕೆರೆಗಳನ್ನು ತುಂಬಿಸುವ ಮಹತ್ವದ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಸಂಪನ್ಮೂಲ ಕ್ರೋಢೀಕರಿಸಲು ಈಗಿರುವ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಬೇಕು. ನೀರಾವರಿ ಯೋಜನೆಗಳು ರೂಪುಗೊಂಡರೆ ರೈತರ ಸಮಸ್ಯೆಗಳು ಬಗೆಹರಿಹಯುತ್ತವೆ ಎಂದು ಹೇಳಿದರು.

*ಬಾಲಕಿಯರಿಗೆ ಉಚಿತ ಕ್ಯಾನ್ಸರ್‌ ಲಸಿಕೆ:

ಸಿರಿಗೆರೆಯಲ್ಲಿ ಓದುತ್ತಿರುವ 14 ವರ್ಷದ ಒಳಗಿನ ಬಾಲಕಿಯರಿಗೆ ಕ್ಯಾನ್ಸರ್‌ ನಿರೋಧಕ ಲಸಿಕೆಯನ್ನು ಉಚಿತವಾಗಿ ಕೊಡಿಸಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಜೂನ್‌ ನಲ್ಲಿ ಶಾಲೆಗಳು ತೆರೆಯುತ್ತಿದ್ದಂತೆ ಈ ಕೆಲಸ ಮಾಡಲಾಗುವುದು. ಅದಕ್ಕಾಗಿ 1.5 ಕೋಟಿ ಹಣ ಖರ್ಚಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

*ಭರಮಸಾಗರ ತಾಲ್ಲೂಕು ಕೇಂದ್ರವಾಗಲಿ:

ಹೋಬಳಿ ಕೇಂದ್ರವಾದ ಭರಮಸಾಗರವು ತಾಲೂಕು ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಈ ಹಿಂದೆಯೇ ಅದಕ್ಕಾಗಿ ಪ್ರಯತ್ನಗಳು ನಡೆದಿವೆ. ತರಳಬಾಳು ಶ್ರೀಗಳ ಹೋರಾಟದ ಫಲವಾಗಿ ಭರಮಸಾಗರ ಭಾಗವು ಸಮೃದ್ಧವಾಗಿದೆ. ಅವರ ಹೋರಾಟದ ಫಲವಾಗಿ ಭರಮಸಾಗರ ತಾಲೂಕು ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಕಾಂಗ್ರೆಸ್‌ ಮುಖಂಡ ಎಸ್.‌ಎಂ.ಎಲ್.‌ತಿಪ್ಪೇಸ್ವಾಮಿ ಹೇಳಿದರು. ಭರಮಸಾಗರದ ಮೇಲೆ ವಿಶೇಷ ಮಮತೆ ಇರುವ ಶ್ರೀಗಳು ಸರ್ಕಾರದ ಮೇಲೆ ಒತ್ತಡ ತಂದು ಹೋಬಳಿ ಕೇಂದ್ರಕ್ಕೆ ತಾಲೂಕು ಕೇಂದ್ರದ ಮಾನ್ಯತೆ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಕೋಗುಂಡೆ ಎಚ್.‌ಎಂ. ದ್ಯಾಮಣ್ಣ, ಎಚ್.ಎಂ.ಮಂಜುನಾಥ್, ಚಿಕ್ಕಬೆನ್ನೂರಿನ ಜಿ.ಬಿ.ತೀರ್ಥಪ್ಪ, ಡಿ.ವಿ.ಎಸ್ ಶರಣಪ್ಪ, ಡಿ.ವಿ. ಪ್ರವೀಣ್, ಲಿಂಗವ್ವನಗತ್ತಿಹಳ್ಳಿ ತಿಪ್ಪೇಸ್ವಾಮಿ, ಎಮ್ಮೆಹಟ್ಟಿ ಕೃಷ್ಣಮೂರ್ತಿ, ಪಿಎಸ್‌ಐ ಪ್ರಸಾದ್, ಶಾಂತ ಅಶೋಕ್, ಸಿ.ಟಿ.ಮಹಾಂತೇಶ್, ಶೈಲೇಶ್‌ಕುಮಾರ್, ನಿರಂಜನಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಭಕ್ತರ ದೇಣಿಗೆ ಕೆರೆ ಮತ್ತು ದಾಸೋಹಕ್ಕೆ ಮೀಸಲು:

ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ಭಕ್ತರ ನೀಡಿದ ಕಾಣಿಕೆ 3 ಕೋಟಿ 58 ಲಕ್ಷ ಆಗಿದೆ. ಮಹೋತ್ಸವಕ್ಕೆ ಖರ್ಚಾದ ಹಣ ಹೊರತು ಪಡಿಸಿ ಉಳಿವ ಹಣದಲ್ಲಿ ಭರಮಸಾಗರ ಏತ ನೀರಾವರಿಯ ತುರ್ತು ಕೆಲಸಗಳಿಗೆ ಅರ್ಧ ಹಣ ಮೀಸಲು ಇಡಲಾಗುವುದು. ಇನ್ನು ಅರ್ಧ ಹಣವನ್ನು ಸಿರಿಗೆರೆಯ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಉಚಿತ ಪ್ರಸಾದದ ವೆಚ್ಚಕ್ಕೆ ಬಳಸಿಕೊಳ್ಳಲಾಗುವುದು. ಮಠದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಉಚಿತ ಪ್ರಸಾದಕ್ಕೆ ಪ್ರತಿ ವರ್ಷ 5.5. ಕೋಟಿ ರೂ. ವೆಚ್ಚ ಆಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''