ಕನ್ನಡಪ್ರಭ ವಾರ್ತೆ ಭದ್ರಾವತಿ
ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಮಧ್ಯಾಹ್ನ ೨.೩೦ಗಂಟೆಗೆ ಚನ್ನಗಿರಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಿಂದ ಆರಂಭಗೊಂಡು ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಡಾ.ರಾಜಕುಮಾರ್ ರಸ್ತೆ ಮೂಲಕ ಹಾಲಪ್ಪ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ರಿಲಯನ್ಸ್ ಪೆಟ್ರೋಲ್ ಬಂಕ್ ಮೂಲಕ ಸಾಗಿ ರಾಷ್ಟ್ರಕವಿ ಕುವೆಂಪು ಮಹಾವೇದಿಕೆಯ ಬಳಿ ಸಾಗಿತು.
ಶ್ರೀಮಠದ ವಿದ್ಯಾರ್ಥಿಗಳು ಶಿವಧ್ವಜ ಹಿಡಿದು, ಮಹಿಳೆಯರು ಬಣ್ಣದ ಸೀರೆಯನ್ನುಟ್ಟು ಕುಂಭ ಕಳಸಗಳನ್ನು ಹೊತ್ತು ಸಹಸ್ರಾರು ಭಕ್ತರು ಡೊಳ್ಳುಕುಣಿತ ಇತರ ಕಲಾತಂಡಗಳೊಂದಿಗೆ ಸಾಗಿದರು.ತೆರೆದ ವಾಹನ, ಬೆಳ್ಳಿ ಪಲ್ಲಕ್ಕಿಯನ್ನು ಬೃಹತ್ ಹೂವಿನ ಹಾರಗಳಿಂದ ಸಿಂಗರಿಸಲಾಗಿತ್ತು. ಶ್ರೀಗಳು ಶ್ರೀ ಮಠದ ಹಿರಿಯ ಶ್ರೀಗಳ ಪುತ್ಥಳಿಗೆ ಪುಷ್ಪ ನಮಿಸಿ ನಂತರ ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನರಾದರು. ಗ್ರಾಮದ ಪ್ರತಿ ಬೀದಿಗಳ ಗ್ರಾಮಸ್ಥರು ತಳಿರು ತೋರ, ಮಹಿಳೆಯರು ರಂಗೋಲಿ ಹಾಕಿದರು. ದಾವಣಗೆರೆಯ ಶಿವಸೈನ್ಯದ ಯುವಕರು ಶಿವ ಬಾವುಟದ ಜತೆಗೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆಯಲ್ಲಿ ಕಡೂರಿನ ಪುರುಷ, ಮಹಿಳಾ ವೀರಗಾಸೆ, ಆಂಜನೇಯ ಗೊಂಬೆ, ಶಿವ ಗೊಂಬೆ, ಬೆಳ್ತಂಗಡಿಯ ನವಿಲು ಕುಣಿತ, ಗಾರುಡಿ ಗೊಂಬೆ, ನರಸಿಂಹ ಸ್ವಾಮಿ, ತಮಟೆ, ಜೋಕರ್ ೪, ಕೀಲು ಕುದುರೆ, ಕೋಳಿ ಹುಂಜ, ದಾವಣಗೆರೆಯ ನಾಸಿಕ್ ಡೋಲು, ನಗಾರಿ ಬಡಿತ, ಮಹಿಷಾಸುರ, ರಾಣಿ, ಜಗ್ಗಲಿಗೆ, ಕಹಳೆ ಮತ್ತು ಛತ್ರಿ ಚಂಡೆವಾದ್ಯ, ಮಹಿಳಾ ತಮಟೆ, ಮೈಸೂರಿನ ಪೂಜಾ ಕುಣಿತ, ಮಹಿಳಾ ಡೊಳ್ಳು ತ್ರಾಶ್‌ವಾದ್ಯ, ಗೊರವರ ಕುಣಿತ, ತ್ರಾಶ್, ದಾವಣಗೆರೆಯ ನಂದಿಧ್ವಜ ಕುಣಿತ, ಹೊಸದುರ್ಗದ ವೀರಗಾಸೆ, ವೀರಗಾಸೆ ಸೇರಿ ಇಪ್ಪತ್ತಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರದರ್ಶನ ನೀಡಿದವು.
ಭಕ್ತರು ಶಿವಧ್ವಜ, ಶಿವ, ತರಳಬಾಳು ಸಾಮಾಜ್ಯ, ೧೧೦೮, ಜಗಮೆಚ್ಚಿದ ಗುರು, ಆಧುನಿಕ ಭಗೀರಥ, ಜಲಋಷಿ, ಡಾ.ಗುರುಗಳು, ಆರಾಧ್ಯದೈವ ಬಾವುಟಗಳನ್ನು ಹಿಡಿದು ತರಳಬಾಳು ಶ್ರೀಗಳಿಗೆ ಜೈಕಾರ ಹಾಕಿದರು. ೫೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಶಿಸ್ತು ಪಾಲನೆ ಮಾಡಿದರು.