ಮುಂಡರಗಿ: ರೈತರಿಗೆ ಅವಶ್ಯವಿರುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಡಂಬಳ ಹಾಗೂ ಮುಂಡರಗಿಯಲ್ಲಿ ದಾಸ್ತಾನು ಮಾಡಲಾಗಿದೆ. ಮುಂದಿನ ವಾರ ವಿತರಣೆ ಕಾರ್ಯ ಕೈಗೊಳ್ಳಲಾಗುವುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದ್ದಾರೆ.
ರೈತರಿಗೆ ರಸಗೊಬ್ಬರ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಮುಂಗಾರು ಪೂರ್ವ ಸಿದ್ಧತಾ ಅಭಿಯಾನದ ಮೂಲಕ ರೈತರಿಗೆ ಮಣ್ಣಿನ ಪರೀಕ್ಷೆ, ಗುಣಮಟ್ಟದ ಬೀಜಗಳ ಆಯ್ಕೆ, ಬಿತ್ತನೆ ಪೂರ್ವ ಬೀಜೋಪಚಾರ ಹಾಗೂ ಸಂಯುಕ್ತ ಗೊಬ್ಬರಗಳ ಬಳಕೆ ಕುರಿತಾಗಿ ಗ್ರಾಮ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಿತ್ತನೆಗೂ ಮುಂಚಿತವಾಗಿ ಪ್ರಧಾನ ಹಾಗೂ ಲಘು ಪೋಷಕಾಂಶಗಳನ್ನು ಒದಗಿಸುವ ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ರಂಜಕಯುಕ್ತ ಸಾವಯವ ಗೊಬ್ಬರ, ಹಸಿರೆಲೆಗೊಬ್ಬರ ಇತ್ಯಾದಿಗಳನ್ನು ಮೊದಲ ಆಧ್ಯತೆ ಮೇಲೆ ಬಳಸುವುದು, ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಆಂಶ ಮಾತ್ರವಿರುತ್ತದೆ.ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೋಟ್ಯಾಷಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ.