ಹುಲಿಗೆಮ್ಮ ದೇವಿ ರಥೋತ್ಸವಕ್ಕೆ 3 ಲಕ್ಷ ಭಕ್ತರು ಸಾಕ್ಷಿ

KannadaprabhaNewsNetwork | Published : May 22, 2025 12:51 AM
ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನದ ಮಹಾರಥೋತ್ಸವ ಮೂರು ಲಕ್ಷ ಭಕ್ತರ ಜಯಘೋಷಗಳ ನಡುವೆ ಬುಧವಾರ ಸಂಜೆ ಅದ್ಧೂರಿಯಾಗಿ ನಡೆಯಿತು. ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೆ 2 ಲಕ್ಷ ಭಕ್ತರು, ಅಮ್ಮನವರ ದರ್ಶನ ಪಡೆದರೆ, ಸಂಜೆ ನಡೆದ ರಥೋತ್ಸವದಲ್ಲಿ 3 ಲಕ್ಷ ಭಕ್ತರು ಭಾಗವಹಿಸಿದ್ದರು. ಒಟ್ಟಾರೆ 5 ಲಕ್ಷಕ್ಕೂ ಅಧಿಕ ಭಕ್ತರು ಜಾತ್ರೆಗೆ ಸಾಕ್ಷಿಯಾದರು.
Follow Us

ಮುನಿರಾಬಾದ್:ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನದ ಮಹಾರಥೋತ್ಸವ ಮೂರು ಲಕ್ಷ ಭಕ್ತರ ಜಯಘೋಷಗಳ ನಡುವೆ ಬುಧವಾರ ಸಂಜೆ ಅದ್ಧೂರಿಯಾಗಿ ನಡೆಯಿತು.

ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೆ 2 ಲಕ್ಷ ಭಕ್ತರು, ಅಮ್ಮನವರ ದರ್ಶನ ಪಡೆದರೆ, ಸಂಜೆ ನಡೆದ ರಥೋತ್ಸವದಲ್ಲಿ 3 ಲಕ್ಷ ಭಕ್ತರು ಭಾಗವಹಿಸಿದ್ದರು.

ಅಮ್ಮನವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಅರ್ಚಕರು ಪಲ್ಲಕ್ಕಿಯಲ್ಲಿ ಕೂಡ್ರಿಸಿ ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ತಂದು ರಥದಲ್ಲಿ ಇಡಲಾಯಿತು. ಉದೋ ಉದೋ ಹುಲಿಗೆಮ್ಮ ತಾಯಿ ಎಂಬ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಥವು ಮುಂದೆ ಚಲಿಸುತ್ತಿದ್ದಂತೆ ಲಕ್ಷಾಂತರ ಭಕ್ತರು ತೇರಿನತ್ತ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ತೇರು ದೇವಸ್ಥಾನದಿಂದ ಮುದ್ದಮ್ಮನ ಕಟ್ಟೆಯ ವರೆಗೆ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು.

ಮಹಾರಥೋತ್ಸವದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ನಳಿನ್ ಕುಮಾರ್ ಅತುಲ್, ಎಸ್ಪಿ ರಾಮ ಆರ್. ಸಿದ್ದಿ. ಹುಲಿಗಿ ಗ್ರಾಮದ ಹಿರಿಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.

50 ಸಾವಿರ ಜನರಿಗೆ ದಾಸೋಹ:

ದೇವಸ್ಥಾನದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಜಾತ್ರಾ ಸಮಯದಲ್ಲಿ ಅಮ್ಮನವರ ಮಹಾ ದಾಸೋಹ ಪ್ರಾರಂಭಿಸಲಾಯಿತು. ಈ ವರೆಗೆ 1 ಲಕ್ಷಕ್ಕೂ ಅಧಿಕ ಭಕ್ತರು ಹಾಗೂ ರಥೋತ್ಸವದ ದಿನವಾದ ಬುಧವಾರ 50 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಭಕ್ತರಿಗೆ ರೊಟ್ಟಿ, ಕಾಳು ಪಲ್ಯೆ, ಒಂದು ಬಗೆಯ ಸಿಹಿ ತಿಂಡಿ ಹಾಗೂ ಅನ್ನ ಸಾಂಬಾರನ್ನು ದಾಸೋಹದಲ್ಲಿ ನೀಡಲಾಗುತ್ತಿದೆ.ಸ್ವಚ್ಛತೆಗೆ ಆದ್ಯತೆ:

ಪ್ರಸಕ್ತ ಸಾಲಿನ ಜಾತ್ರೆಯಲ್ಲಿ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸ್ವಚ್ಛತೆಗೆ ಪ್ರಪ್ರಥಮ ಆದ್ಯತೆ ನೀಡಿದೆ. ದೇವಸ್ಥಾನದ ಆವರಣ ಮತ್ತು ಸುತ್ತಮುತ್ತಲಿನಲ್ಲಿ ಸ್ವಚ್ಛತೆ ಕಾಪಾಡಲು 200 ಜನ ತಾತ್ಕಾಲಿಕ ಸಿಬ್ಬಂದಿ ನೇಮಿಸಲಾಗಿದೆ. ದೇವಸ್ಥಾನದ ಸುತ್ತಮುತ್ತ ಭಕ್ತರ ಅನುಕೂಲಕ್ಕಾಗಿ 12 ತಾತ್ಕಾಲಿಕ ಶೌಚಾಲಯ, 3 ತಾತ್ಕಾಲಿಕ ಆರೋಗ್ಯ ಕೇಂದ್ರ, ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಾಶ್ ರಾವ್ ಕನ್ನಡಪ್ರಭಕ್ಕೆ ತಿಳಿಸಿದರು.ಜಾತ್ರೆ ನಿಮಿತ್ತ ಪ್ರಾಣಿ ಬಲಿ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅದರಲ್ಲಿ ತೊಡಗಿದವರು ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ವಿಶೇಷ ಬಸ್‌ ಸೌಲಭ್ಯ

ಹುಲಿಗೆಮ್ಮ ದೇವಿ ಜಾತ್ರೆಗೆ ಬರುವ ಭಕ್ತರು ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕೊಪ್ಪಳ, ಹೊಸಪೇಟೆ ಹಾಗೂ ಗಂಗಾವತಿಯಿಂದ ತಡೆ ರಹಿತ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ಜಿಲ್ಲೆಯ ವಿವಿಧ ಸ್ಥಳಗಳಿಂದಲೂ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಪೊಲೀಸ್ ಬಂದೋಬಸ್ತ್ಜಾತ್ರಾ ಮಹೋತ್ಸವ ನಿಮಿತ್ತ ಹುಲಿಗಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಬ್ಬರು ಅಡಿಷನಲ್ ಎಸ್ಪಿ, ಮೂವರು ಡಿಎಸ್‌ಪಿ, 8 ಜನ ಸಿಪಿಐ, 20 ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌, 400 ಜನ ಪೇದೆ, 200 ಜನ ಹೋಂ ಗಾರ್ಡ್ಸ್ ಹಾಗೂ ಕೆಎಸ್‌ಆರ್‌ಪಿಯು 2 ತುಕಡಿ ಮತ್ತು ಡಿಎಆರ್‌ನ 4 ನಾಲ್ಕು ತುಕಡಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಆರ್‌.ಸಿದ್ದಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.