ಕುಮಟಾ: ಭಾರತದಲ್ಲೆಲ್ಲೂ ಗೋವಿನ ಹತ್ಯೆಯಾಗದಂತೆ ಕಾನೂನು ಜಾರಿಯಾಗಬೇಕು. ಗೋವಿಗೆ ರಾಷ್ಟ್ರೀಯ ಗೌರವ ಸಿಗಬೇಕು ಎಂಬ ಕಾರಣಕ್ಕೆ ಈ ಬಾರಿ ೩೧ ಕೋಟಿ ಸಹಿ ಸಂಗ್ರಹಿಸುವ ಗುರಿಯೊಂದಿಗೆ ಅಭಿಯಾನ ಆರಂಭಿಸಿದ್ದೇವೆ ಎಂದು ರವೀಂದ್ರನಾಥ ಭಾರತೀ ಸ್ವಾಮೀಜಿ(ನಂದಿಬಾಬಾ) ನುಡಿದರು.
ಭಾರತದ ಸನಾತನ ಪರಂಪರೆ ಸಂಸ್ಕೃತಿ ಮೂಲ ಆಧಾರವೇ ಗೋವು. ಪ್ರತಿಯೊಂದು ಗ್ರಾಮದಿಂದಲೂ ಗೋಸಮ್ಮಾನ ಅಭಿಯಾನಕ್ಕಾಗಿ ಸಹಿ ಸಂಗ್ರಹಿಸಿ ಕೇಂದ್ರ ಸರ್ಕಾರದಲ್ಲಿ ಗೋಮಂತ್ರಾಲಯದ ರಚನೆಯಾಗಬೇಕು. ಗೋಹತ್ಯಾ ನಿಷೇಧ ಹಾಗೂ ಗೋವಿನ ಸಂರಕ್ಷಣೆಯ ಕಾನೂನು ಜಾರಿಯಾಗಬೇಕು. ಈ ಮೂಲಕ ಹಿಂದೆ ಋಷಿಮುನಿಗಳಿಂದ ಆರಂಭಿಸಿ ಈವರೆಗೆ ಗೋಮಾತೆಗೆ ನ್ಯಾಯ ಕೊಡುವ ಪ್ರಯತ್ನವಾಗಬೇಕು. ಹಿಂದೆ ೨೦ ಕೋಟಿ ಸಹಿ ಸಂಗ್ರಹಿಸಿ ನೀಡಿದ್ದೇವೆ. ನಮ್ಮ ಅಭಿಯಾನಕ್ಕೆ ಗೋಕರ್ಣ ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳ ಸಹಯೋಗ ಮಾರ್ಗದರ್ಶನದಲ್ಲಿ ರಥ ಯಾತ್ರೆ ಮೂಲಕ ಈ ಜಿಲ್ಲೆಯಲ್ಲಿ ಉತ್ತಮ ಸಂದೇಶ ಬಿತ್ತರಿಸುತ್ತಿದ್ದೇವೆ ಎಂದರು.
ಬೆಂಗಳೂರಿನ ಸಂಸ್ಕೃತ ವಿದ್ಯಾಲಯದ ಪ್ರಾಧ್ಯಾಪಕರಾದ ಸ್ವಾಮಿ ಆರೂಢ ಭಾರತೀ ಸ್ವಾಮಿಜಿ ಮಾತನಾಡಿ, ತಾಲೂಕಿನಾದ್ಯಂತ ರಥ ಸಂಚರಿಸಿ ಸಹಿ ಸಂಗ್ರಹಿಸಿ, ಮುಂದಿನ ದಿನಗಳಲ್ಲಿ ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ ಸೇರಿದಂತೆ ಜಿಲ್ಲಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲಿದ್ದೇವೆ. ನಮ್ಮೆಲ್ಲರ ಉದ್ಧಾರಕ್ಕಾಗಿ ಅವತರಿಸಿದ ಬಂದ ಪುಣ್ಯಕೋಟಿಯ ಉಳಿವಿಗಾಗಿ ಯಾರೂ ಜೀವ ಕೊಡಬೇಕೆಂದಿಲ್ಲ, ದುಡ್ಡು ಕೊಡಬೇಕೆಂದಿಲ್ಲ, ಆಸ್ತಿ ಪಾಸ್ತಿ ಕೊಡಬೇಕೆಂದಿಲ್ಲ, ಸಮಾಜದ ಸಾಮರಸ್ಯ ಹಾನಿ ಮಾಡುವ ಉದ್ದೇಶವೂ ಇಲ್ಲ. ಈ ಅಭಿಯಾನದ ಮುಖ್ಯ ಉದ್ದೇಶ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರಲು ಮನವಿ ಪತ್ರಕ್ಕೆ ಸಾರ್ವಜನಿಕರ ಹಸ್ತಾಕ್ಷರ ಸಂಗ್ರಹ ಮಾತ್ರ. ಗೋಮಾತೆಯ ಉಳಿವು ಜೀವ ಸಂಕುಲದ ಉಳಿವು ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗೋಮಾತೆಯ ಮಹತ್ವ, ಗೋಸಂರಕ್ಷಣೆಯ ಅಗತ್ಯತೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಮಾತೆ ಹೊಂದಿರುವ ಪವಿತ್ರ ಸ್ಥಾನವನ್ನು ಉಳಿಸಿ ಬೆಳೆಸುವ ಈ ಅಭಿಯಾನ ಅತ್ಯಂತ ಅರ್ಥಪೂರ್ಣವೂ ಅತ್ಯಾವಶ್ಯಕವೂ ಆಗಿದೆ. ಗೋಮಾತೆಯ ರಕ್ಷಣೆ, ಪೋಷಣೆ ಮತ್ತು ಸಂವರ್ಧನೆಗಾಗಿ ಕೈಜೋಡಿಸುವ ಸಂಕಲ್ಪವನ್ನು ಸಮಾಜದ ಪ್ರತಿಯೊಬ್ಬರೂ ಮಾಡಬೇಕು. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.