ನರಗುಂದ: ಸರ್ಕಾರ ಇ- ಸ್ವತ್ತು ಅಭಿಯಾನ ಮೂಲಕ ಗ್ರಾಮೀಣ ಪ್ರದೇಶ ಜನರಿಗೆ ಆಸ್ತಿ ದಾಖಲೆಗಳ ಕ್ರಮಬದ್ಧತೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಪಂ ಅಧಿಕಾರಿ ಶ್ರೀಧರ್ ಚಿನಗುಂಡಿ ಹೇಳಿದರು.
ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಆಸ್ತಿಗಳ ನಿಖರ ಹಾಗೂ ಕ್ರಮಬದ್ಧ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರದ ಭೂ-ಗ್ಯಾರಂಟಿ ಯೋಜನೆಯಡಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡುವ ಅರ್ಹ ಆಸ್ತಿಗಳಿಗೆ ನಿಯಮಾನುಸಾರ 11ಎ ಅಥವಾ 11ಬಿ ನಮೂನೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಇ-ಸ್ವತ್ತು ದಾಖಲೆಗಳಿಗಾಗಿ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಗ್ರಾಪಂ ಕಚೇರಿಯನ್ನು ಸಂಪರ್ಕಿಸಬೇಕು. ಅಭಿಯಾನದ ಕುರಿತು ಮಾಹಿತಿ ಅಥವಾ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಪಂಚಾಯಿತಿ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿನ ಸಿಬ್ಬಂದಿ ಸಮಸ್ಯೆಗಳಿಗೆ ಉತ್ತರಿಸಿ ಪರಿಹಾರ ಒದಗಿಸಲಿದ್ದಾರೆ. ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದಲ್ಲಿ ತಾಪಂ ಕಚೇರಿಗೆ ದೂರು ಸಲ್ಲಿಸಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಸಿಟಿಜನ್ ಲಾಗಿನ್ ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊರತೆಯಾಗದಂತೆ ನಿಗಾವಹಿಸಲು ಗ್ರಾಮ ಒನ್ ಸಿಬ್ಬಂದಿಗಳ ಜೊತೆ ಇಓ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಿದರು.