ಗಜೇಂದ್ರಗಡ: ತಾಲೂಕಿನ ರಾಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೂಕ್ತ ಕೊಠಡಿಗಳನ್ನು ಒದಗಿಸಬೇಕು, ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಮಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಎಸ್‌ಎಫ್‌ಐ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಹೋರಾಟ ನಡೆಸಿದರು.
ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗಣುವಾಗಿ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ ಮಾಡಬೇಕು ಎಂದು ದೂರಿದ ವಿದ್ಯಾರ್ಥಿಗಳು ಹಾಗೂ ಸಂಘಟನೆ ಮುಖಂಡರು, ಪ್ರತಿಭಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂದು ಸಮಸ್ಯೆಗೆ ಪರಿಹಾರ ಕಲ್ಪಿಸುವರೆಗೆ ಹೋರಾಟವನ್ನು ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಎಸ್‌ಎಫ್‌ಐ ಸಂಘಟನೆ ಮುಖಂಡ ಚಂದ್ರು ರಾಠೋಡ ಮಾತನಾಡಿ, ತಾಲೂಕಿನಲ್ಲಿ ಕೆಲ ಗ್ರಾಮಗಳಿಂದ ಗಜೇಂದ್ರಗಡ ಪಟ್ಟಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಬಸ್ ಸಂಚಾರವಿಲ್ಲ ಅಥವಾ ಶಾಲೆ ಬಿಟ್ಟ ಬಳಿಕವೂ ತಮ್ಮ ಗ್ರಾಮಗಳಿಗೆ ಆಗಮಿಸಲು ಸಕಾಲದಲ್ಲಿಯೂ ಬಸ್ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ.ಪರಿಣಾಮ ತಾಲೂಕಿನ ಕೆಲ ಗ್ರಾಮಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ನಡೆದುಕೊಂಡು ಬರುವ ಸ್ಥಿತಿ ಒಂದೆಡೆಯಾದರೆ ರಾಮಾಪುರ ಗ್ರಾಮದ ಶಾಲೆಯಲ್ಲಿ ಅಂದಾಜು ೩೬೦ ವಿದ್ಯಾರ್ಥಿಗಳಿದ್ದಾರೆ. ಆದರೆ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಕೊಠಡಿಗಳ ಸೌಲಭ್ಯವಿಲ್ಲದ್ದರಿಂದ ಬಯಲಿನಲ್ಲಿ ಕುಳಿತು ಪಾಠ ಕೇಳುವ ಸ್ಥಿತಿಯಲ್ಲಿರುವ ರಾಜ್ಯದ ಏಕೈಕ ತಾಲೂಕು ಎಂದರೆ ಅದು ಗಜೇಂದ್ರಗಡ ತಾಲೂಕು ಎಂದೆನೆಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಶಾಲೆಗಳು ಆರಂಭವಾಗಿ ಅಂದಾಜು ಆರು ತಿಂಗಳು ಗತಿಸುತ್ತಿದ್ದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಸಮರ್ಪಕವಾಗಿ ಪುಸ್ತಕಗಳನ್ನು ಪೂರೈಸಿಲ್ಲ ಎಂದರೆ ಶಿಕ್ಷಣ ಇಲಾಖೆಯ ಹಾಗೂ ಸರ್ಕಾರದ ಕಾರ್ಯ ವೈಖರಿಯ ಕನ್ನಡಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸಿಗುವರೆಗೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎ. ಫನಿಬಂದ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಗೌಡ ಗೌಡ್ರ, ಸಂಘಟನೆಯ ಮುಖಂಡರಾದ ಅನೀಲ ಆರ್., ವೀರೇಶ, ಶರಣು ಮಾಟರಂಗಿ, ಸುಭಾಸ ಪುಜಾರ, ಶಾಲೆಯ ಮುಖ್ಯೋಪಾಧ್ಯಾಯ ಎಂ.ಆರ್. ಹವಾಲ್ದಾರ ಇತರರು ಇದ್ದರು.