ಬ್ಯಾಡಗಿ ಮುಖ್ಯರಸ್ತೆ ಅಗಲೀಕರಣ ಸಾಕಾರ: ಸಚಿವ ರುದ್ರಪ್ಪ ಲಮಾಣಿ

KannadaprabhaNewsNetwork |  
Published : Nov 21, 2026, 02:15 AM IST
ಶುಕ್ರವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ನಡೆದ ಗಜೇಂದ್ರಗಡ -ಸೊರಬ ರಾಜ್ಯ ಹೆದ್ದಾರಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ಕಾರ‍್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿಲ್ಲೆಯ ವಾಣಿಜ್ಯ ನಗರಿ, ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದ ಹಿರಿಮೆ ಹಾಗೂ ಖ್ಯಾತಿಗೆ ತಕ್ಕಂತೆ ಸುಸಜ್ಜಿತ ಮುಖ್ಯರಸ್ತೆಯ ಅಗತ್ಯವಿತ್ತು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಅಗಲೀಕರಣ ಯೋಜನೆ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಇದೀಗ ಸಾಕಾರಗೊಳ್ಳುತ್ತಿರುವುದು ಭವಿಷ್ಯದ ಬ್ಯಾಡಗಿ ಅಭಿವೃದ್ಧಿಗೆ ಮಹತ್ವದ ಮುನ್ನುಡಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಬ್ಯಾಡಗಿ: ಜಿಲ್ಲೆಯ ವಾಣಿಜ್ಯ ನಗರಿ, ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದ ಹಿರಿಮೆ ಹಾಗೂ ಖ್ಯಾತಿಗೆ ತಕ್ಕಂತೆ ಸುಸಜ್ಜಿತ ಮುಖ್ಯರಸ್ತೆಯ ಅಗತ್ಯವಿತ್ತು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಅಗಲೀಕರಣ ಯೋಜನೆ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಇದೀಗ ಸಾಕಾರಗೊಳ್ಳುತ್ತಿರುವುದು ಭವಿಷ್ಯದ ಬ್ಯಾಡಗಿ ಅಭಿವೃದ್ಧಿಗೆ ಮಹತ್ವದ ಮುನ್ನುಡಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಶುಕ್ರವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗಜೇಂದ್ರಗಡ–ಸೊರಬ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಾನು ಬ್ಯಾಡಗಿ ಶಾಸಕರಾಗಿದ್ದ ಅವಧಿಯಲ್ಲಿಯೇ ಮುಖ್ಯರಸ್ತೆ ಅಗಲೀಕರಣದ ವಿಚಾರ ಮುನ್ನೆಲೆಗೆ ಬಂದಿತ್ತು. ಪಟ್ಟಣದ ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದಿಂದ ಬೈಪಾಸ್ ರಸ್ತೆ ನಿರ್ಮಾ ಣದ ಬಗ್ಗೆಯೂ ಚಿಂತನೆ ನಡೆಸಲಾಗಿತ್ತು. ಆದರೆ, ಅಂದು ಯೋಜನೆ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಶಾಸಕ ಬಸವರಾಜ ಶಿವಣ್ಣನವರ ಅವರ ಅವಧಿಯಲ್ಲಿ ಹಲವು ವರ್ಷಗಳ ಕನಸಾಗಿದ್ದ ರಸ್ತೆ ಅಗಲೀಕರಣ ಸಾಕಾರಗೊಳ್ಳುತ್ತಿರುವುದು ವಿಶೇಷ ಎಂದರು.

ಮಾರುಕಟ್ಟೆ ಬ್ಯಾಡಗಿಯಲ್ಲಿಯೇ ಉಳಿಯಲಿದೆ: ಮಾಜಿ ಸಚಿವ ಹಾಗೂ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಮುಖ್ಯರಸ್ತೆ ಅಭಿವೃದ್ಧಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮತ್ತಷ್ಟು ಬಲ ಸಿಗಲಿದೆ, ಸೂರ್ಯ-ಚಂದ್ರ ಇರುವವರೆಗೂ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಇದೇ ಪಟ್ಟಣದಲ್ಲಿ ಉಳಿಯಲಿದೆ. ಈ ಬಗ್ಗೆ ಯಾರಿಗೂ ಯಾವುದೇ ಆತಂಕ ಅಥವಾ ಸಂಶಯ ಬೇಡ ಎಂಬ ಆಶಯ ವ್ಯಕ್ತಪಡಿಸಿದರು.

ಎಲ್ಲರ ಸಂಘಟಿತ ಪ್ರಯತ್ನಕ್ಕೆ ಸಂದ ಜಯ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಕಾರ್ಯ ಸಾಕಾರಗೊಳ್ಳಲು ಹೋರಾಟ ಸಮಿತಿ ಸೇರಿದಂತೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು, ವರ್ತಕರು ಹಾಗೂ ಸಾರ್ವಜನಿಕರು ನಿರಂತರವಾಗಿ ಶ್ರಮಿಸಿದ್ದಾರೆ. ಮಾಜಿ ಸಚಿವ ಶಿವಾನಂದ ಪಾಟೀಲ, ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ರಸ್ತೆ ಅಗಲೀಕರಣಕ್ಕೆ ಸಹಕರಿಸಿದ ಆಸ್ತಿ ಮಾಲೀಕರ ಕೊಡುಗೆ ಮಹತ್ವದ್ದಾಗಿದೆ, ಎಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಇಂದು ಯೋಜನೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ ಎಂದರು.

ಬ್ಯಾಡಗಿ ಮೂಲತಳಿ ಸಂರಕ್ಷಣೆಗೆ ಒತ್ತು ನೀಡಿ: ಮಾಜಿ ಶಾಸಕ ಹಾಗೂ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ಹಲವು ವರ್ಷಗಳ ಹೋರಾಟ ಹಾಗೂ ನಿರೀಕ್ಷೆಯ ನಂತರ ಮುಖ್ಯರಸ್ತೆ ಅಗಲೀಕರಣದ ಕನಸು ನನಸಾಗುತ್ತಿರುವುದು ಬ್ಯಾಡಗಿ ಪಾಲಿಗೆ ಸಂತಸದ ಸಂಗತಿ, ಈ ಸಾಧನೆಯ ಹಿಂದೆ ಪ್ರತಿಯೊಬ್ಬರ ಪರಿಶ್ರಮವಿದೆ. ಬ್ಯಾಡಗಿ ಮೆಣಸಿನಕಾಯಿಯ ಮೂಲತಳಿಯನ್ನು ಸಂರಕ್ಷಿಸುವ ಜೊತೆಗೆ ಹೊಸ ತಳಿಗಳ ಸಂಶೋಧನೆಗೂ ಆದ್ಯತೆ ನೀಡಬೇಕು. ಎಪಿಎಂಸಿಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಹಾಗೂ ಪ್ರಯೋಗಾಲಯ (ಲ್ಯಾಬ್) ಮಂಜೂರು ಮಾಡಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಎನ್. ರಘು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಡಿವೈಎಸ್‌ಪಿ ಗಿರಿಮಲ್ಲಪ್ಪ ತಳಕಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಏರೆಶಿಮಿ, ರಸ್ತೆ ಅಗಲೀಕರಣ ಹೋರಾಟ ಸಮಿತಿಯ ಗೌರವಾಧ್ಯಕ್ಷ ಗಂಗಣ್ಣ ಏಲಿ, ಅಧ್ಯಕ್ಷ ಸುರೇಶ ಛಲವಾದಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಆದಿ ಜಾಂಭವ ಅಭಿವೃದ್ಧಿ ನಿಗಮದ ನಿರ್ದೇಶಕ ದುರ್ಗೇಶ ಗೋಣೆಮ್ಮನವರ, ಬಸವರಾಜ ಸವಣೂರು, ದಾನಪ್ಪ ಚೂರಿ, ರಾಜಣ್ಣ ಮೋರಗೇರಿ, ವಿನಾಯಕ ಕಂಬಳಿ, ಪಾಂಡುರಂಗ ಸುತಾರ, ಕಿರಣಕುಮಾರ ಎಂ.ಎಲ್. ಸಿದ್ದಲಿಂಗಪ್ಪ ಶೆಟ್ಟಿರ, ಸಂತೋಷ ಹೊಸಂಗಡಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ಡಿ.ಬಿ.ಆದರ್ಶ ಸ್ವಾಗತಿಸಿದರು. ಮಲ್ಲಪ್ಪ ಕರೆಣ್ಣನವರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟ್ಲ ನಾಗರಿಕರ ಕನಸು ನನಸು: ಶಾಸಕ ಅಶೋಕ್ ರೈ
ಬರವಣಿಗೆಯಿಂದ ಒತ್ತಡ ಕಡಿಮೆ: ಮೌಲ್ಯ‌ ಬಾಲಾಡಿ