5000 ಯೂನಿಟ್‌ ರಕ್ತ ಸಂಗ್ರಹಿಸುವ ಗುರಿ

KannadaprabhaNewsNetwork |  
Published : Nov 26, 2026, 02:00 AM IST
ಜಿಲ್ಲಾಡಳಿತವು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅವರಿಗೆ ಅಗತ್ಯ ರಕ್ತದ ಕೊರತೆ ನೀಗಿಸಿ, ಎಲ್ಲರಿಗೂ ಸಹಾಯವಾಗುವ ಉದ್ದೇಶದಿಂದ ಜಿಲ್ಲೆಯ ಎಂಟು ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಧಾರವಾಡ:

ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅವರಿಗೆ ಅಗತ್ಯ ರಕ್ತದ ಕೊರತೆ ನೀಗಿಸಿ, ಎಲ್ಲರಿಗೂ ಸಹಾಯವಾಗುವ ಉದ್ದೇಶದಿಂದ ಜಿಲ್ಲೆಯ ಎಂಟು ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಲ್ಲಾಡಳಿತವು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲೆಯ ಎಲ್ಲ ಬ್ಲಡ್ ಬ್ಯಾಂಕ್‌ಗಳು, ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳು ವತಿಯಿಂದ ಬುಧವಾರ ಆಯೋಜಿಸಿದ್ದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿದ ಅವರು, ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದದ್ದು. ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯವಿದೆ. ರಕ್ತವನ್ನು ವಿವಿಧ ಘಟಕಗಳಾಗಿ ವಿಂಗಡಿಸಿ ಮೂವರು ರೋಗಿಗಳಿಗೆ ಬಳಸಬಹುದಾಗಿದೆ ಎಂದರು.

ಈ ವರ್ಷದ ರಕ್ತದಾನ ಶಿಬಿರದ ಘೋಷವಾಕ್ಯ ‘ಮಾನವೀಯತೆಯ ಒಂದು ಹನಿ, ರಕ್ತ ನೀಡಿ ಜೀವ ಉಳಿಸಿ'''''''' ಎಂಬುದಾಗಿದೆ. ಜಿಲ್ಲೆಯಲ್ಲಿ ನೂರು ಹಾಗೂ ಇನ್ನೂರು ಬಾರಿ ರಕ್ತದಾನ ಮಾಡಿದ ಅನೇಕರು ಇದ್ದಾರೆ. ಅಂತಹ ಎಲ್ಲ ರಕ್ತದಾನಿಗಳನ್ನು ಅಭಿನಂದಿಸುವ ಕಾರ್ಯವಾಗಲಿ ಎಂಬ ಸಲಹೆ ನೀಡಿದರು.

ರಕ್ತದಾನ ಶಿಬಿರಗಳು ಆಗಾಗ ನಡೆಯಬೇಕು. ಆರೋಗ್ಯದ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ನಿರ್ದಿಷ್ಟ ಅವಧಿಗೊಮ್ಮೆ ರಕ್ತದಾನ ಮಾಡಲು ಅವಕಾಶವಿದ್ದರೂ, ಹೆಚ್ಚಿನ ಜನರು ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಮತ್ತೊಂದೆಡೆ ರಕ್ತದ ಅಗತ್ಯವಿರುವವರು ಬ್ಲಡ್ ಬ್ಯಾಂಕ್‌ಗಳಿಗೆ ಅಲೆದಾಡುವ ಹಾಗೂ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ಸಂಪರ್ಕಿಸಿ ರಕ್ತದಾನಕ್ಕೆ ಮನವಿ ಮಾಡುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಾದ್ಯಂತ ನಡೆಯುತ್ತಿರುವ ಶಿಬಿರಗಳಲ್ಲಿ ಕನಿಷ್ಠ ಐದು ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. 18 ವರ್ಷ ತುಂಬಿದ ಹಾಗೂ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಆರೋಗ್ಯದ ಮಾನದಂಡಗಳಿಗೆ ಅರ್ಹರಾಗಿರುವ ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು. ಜಿಲ್ಲೆಯಲ್ಲಿ ನಿಗದಿಪಡಿಸಿರುವ ಐದು ಸಾವಿರ ಯೂನಿಟ್‌ಗಳ ಗುರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗಲಿ ಎಂದರು.

ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಹಾಗೂ ತೀವ್ರ ರಕ್ತಸ್ರಾವ ಉಂಟಾದಾಗ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ತುರ್ತಾಗಿ ರಕ್ತ ಒದಗಿಸುವುದು ಅನಿವಾರ್ಯ. ತಮ್ಮ ವೃತ್ತಿಜೀವನದಲ್ಲಿ ಇಂತಹ ಅನೇಕ ಸಂದರ್ಭಗಳನ್ನು ಎದುರಿಸಿದ್ದು, ರಕ್ತದಾನ ಮಾಡಿ ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ ಉದಾಹರಣೆಗಳೂ ಇವೆ ಎಂದರು.

ಡಿಎಚ್‌ಒ ಡಾ. ಪರಶುರಾಮ ಎಫ್. ಕೆ. ಸ್ವಾಗತಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು. ರಕ್ತದಾನ ಮಾಡಿ.ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದಂತಹ ಸಂತೋಷದ ದಿನಗಳನ್ನು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು. ಇಂತಹ ದಿನಗಳಲ್ಲಿ ರಕ್ತನಿಧಿಗೆ ತೆರಳಿ ರಕ್ತದಾನ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ

ಡಾ. ಸಂಜೀವ ಕುಲಕರ್ಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕೆಗೆ ಬರಸಿಡಿಲು ನೀಡಿದ ಸುಪ್ರೀಂ ಆದೇಶ!
ಬಡಜನರ ಶ್ರೇಯೋಭಿವೃದ್ಧಿಯೇ ಪ್ರಜಾಸೇವಾ ಆಂದೋಲನದ ಗುರಿ