ವಿಕೆಗೆ ಬರಸಿಡಿಲು ನೀಡಿದ ಸುಪ್ರೀಂ ಆದೇಶ!

KannadaprabhaNewsNetwork |  
Published : Nov 26, 2026, 02:00 AM IST
ಧಾರವಾಡದ ಶಿವಗಿರಿ ಮನೆಯಿಂದ ಬೆಂಗಳೂರಿಗೆ ಹೊರಡುತ್ತಿದ್ದ ವಿನಯ ಕುಲಕರ್ಣಿ ಅವರನ್ನು ಮುತ್ತಿಕ್ಕಿ, ಕಣ್ಣೀರು ಹಾಕುತ್ತಾ ಭಾರವಾದ ಮನಸ್ಸಿನಿಂದ ಕಳುಹಿಸುತ್ತಿರುವ ಅಭಿಮಾನಿಗಳು.  | Kannada Prabha

ಸಾರಾಂಶ

ತಮಗೆ ಮಂಜೂರಾಗಿದ್ದ ಜಾಮೀನು ರದ್ದಾಗಿ ಮತ್ತೆ ಜೈಲಿಗೆ ಹೋಗುತ್ತೇನೆಂದು ಸ್ವತಃ ವಿನಯ ಕುಲಕರ್ಣಿ, ಕನಸು-ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ. ಬುಧವಾರ ಬೆಳಗ್ಗೆ ವರೆಗೆ ನೆಮ್ಮದಿಯಾಗಿ ಡೈರಿಯಲ್ಲಿ ದನಕರುಗಳ ಸೇವೆಯಲ್ಲಿದ್ದ ಅವರಿಗೆ ಸುಪ್ರೀಂಕೋರ್ಟ್‌ ಆದೇಶವು ಅಕ್ಷರಶಃ ಬರಸಿಡಿಲಿನ ಆಘಾತ ನೀಡಿದೆ.

ಬಸವರಾಜ ಹಿರೇಮಠ

ಧಾರವಾಡ:

ತಮಗೆ ಮಂಜೂರಾಗಿದ್ದ ಜಾಮೀನು ರದ್ದಾಗಿ ಮತ್ತೆ ಜೈಲಿಗೆ ಹೋಗುತ್ತೇನೆಂದು ಸ್ವತಃ ವಿನಯ ಕುಲಕರ್ಣಿ, ಕನಸು-ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ. ಬುಧವಾರ ಬೆಳಗ್ಗೆ ವರೆಗೆ ನೆಮ್ಮದಿಯಾಗಿ ಡೈರಿಯಲ್ಲಿ ದನಕರುಗಳ ಸೇವೆಯಲ್ಲಿದ್ದ ಅವರಿಗೆ ಸುಪ್ರೀಂಕೋರ್ಟ್‌ ಆದೇಶವು ಅಕ್ಷರಶಃ ಬರಸಿಡಿಲಿನ ಆಘಾತ ನೀಡಿದೆ.

ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದ್ದ ಬೆಂಗಳೂರು ಹೈಕೋರ್ಟ್‌ ಮಧ್ಯಂತರ ಆದೇಶವನ್ನು ಬುಧವಾರ ಸುಪ್ರೀಂಕೋರ್ಟ್‌ ರದ್ದುಪಡಿಸುವ ಮೂಲಕ ಎರಡು ವಾರದಲ್ಲಿ ಸಿಬಿಐ ಎದುರು ಶರಣಾಗುವಂತೆ ಆದೇಶ ನೀಡಿರುವುದು ವಿನಯ ಕುಲಕರ್ಣಿ ಮಾತ್ರವಲ್ಲದೇ ಅವರ ಕುಟುಂಬ ಹಾಗೂ ಅಭಿಮಾನಿಗಳ, ಕಾರ್ಯಕರ್ತರ ತೀವ್ರ ಶೋಕಕ್ಕೆ ಕಾರಣವಾಗಿದೆ.

ಕಣ್ಣೀರು ಹಾಕಿದ ಅಭಿಮಾನಿಗಳು:

ಆದೇಶ ಪ್ರಕಟವಾಗುತ್ತಿದ್ದಂತೆಯೇ ಡೈರಿಯಲ್ಲಿದ್ದ ವಿನಯ ಕುಲಕರ್ಣಿ ನೇರವಾಗಿ ಮನೆಗೆ ಬಂದರು. ಒಳಗಡೆ ಹೋದವರು ಕೆಲವು ಗಂಟೆಗಳ ಕಾಲ ಹೊರಗೆ ಬರಲಿಲ್ಲ. ಇದೇ ವೇಳೆ ಶಿವಗಿರಿಯಲ್ಲಿರುವ ಅವರ ಮನೆಗೆ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ದಂಡೇ ಆಗಮಿಸಿತ್ತು. ಅಷ್ಟೊಂದು ಜನರಿದ್ದರೂ ಮನೆಯಲ್ಲಿ ನೀರವ ಮೌನ ಎದ್ದುಕಾಣುತ್ತಿತ್ತು. ಬಂದ ಎಲ್ಲರ ಮುಖದಲ್ಲಿ ನೋವು, ಕಣ್ಣಿನಲ್ಲಿ ನೀರು ಕಾಣುತ್ತಿತ್ತು. ಸ್ಥಳೀಯ ಮುಖಂಡರು ಕೆಲ ಹೊತ್ತು ವಿನಯ ಜತೆಗೆ ಮಾತುಕತೆ ನಡೆಸಿ ಸಮಾಧಾನ ಮಾಡಿದರು. ಈ ವೇಳೆ ಶಾಸಕರ ಕುಟುಂಬಸ್ಥರಂತೂ ದುಃಖದ ಮಡುವಿನಲ್ಲಿದ್ದರು.

ಬಿಕ್ಕಿ ಅತ್ತ ಅಭಿಮಾನಿಗಳು:

ಸುಮಾರು ನಾಲ್ಕು ಗಂಟೆಗಳ ಬಳಿಕ ಹೊರಗಡೆ ಬಂದ ವಿನಯ ಕುಲಕರ್ಣಿಯನ್ನು ತಬ್ಬಿಕೊಂಡ ಅಭಿಮಾನಿಗಳು ಕಣ್ಣೀರು ಹಾಕಿದರು. ಕೈ ಹಿಡಿದು ಹೋಗಬೇಡ ಎನ್ನುತ್ತಿದ್ದರು. ಅದಕ್ಕೆ ಪ್ರತಿಯಾಗಿ ವಿನಯ ಕೂಡ ಕಣ್ಣೀರು ಹಾಕುತ್ತಲೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ ಕಾರು ಏರಿ ಬೆಂಗಳೂರಿನತ್ತ ಸಾಗಿದರು.

ದಸರಾ, ದೀಪಾವಳಿ:

ಈ ಮೊದಲು ಹೈಕೋರ್ಟ್‌ ನೀಡಿದ್ದ ಜಾಮೀನು ಹಾಗೂ ಹತ್ತು ವರ್ಷಗಳ ನಂತರ ಧಾರವಾಡ ಜಿಲ್ಲೆಗೆ ನೀಡಿದ್ದ ಪ್ರವೇಶವು ವಿನಯ ಕುಲಕರ್ಣಿ, ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ತೀವ್ರ ಸಂತಸ ನೀಡಿತ್ತು. ಡೈರಿ ನಿರ್ವಹಣೆ ಜತೆಗೆ ಗ್ರಾಮೀಣ ಪ್ರದೇಶಕ್ಕೆ ಹೋಗಿ ಜನರ ಭೇಟಿ, ಕೆಡಿಪಿ ಸಭೆ ಮೂಲಕ ರಾಜಕೀಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿದ್ದರು. ಈ ಮಧ್ಯೆ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ದಸರಾ ಹಾಗೂ ದೀಪಾವಳಿ ಸಹ ಆಚರಿಸಿದ್ದ ಅವರ ಖುಷಿ ಬಹಳ ದಿನ ಉಳಿಯಲಿಲ್ಲ.

ಬರಸಿಡಿಲು, ಖುಷಿ:

ಒಂದೆಡೆ ಸುಪ್ರೀಂಕೋರ್ಟ್‌ ಆದೇಶವು ವಿನಯ ಕುಲಕರ್ಣಿ ಹಾಗೂ ಅವರ ಕುಟುಂಬಕ್ಕೆ ಬರಸಿಡಿಲು ಬಡಿದರೆ, ಇನ್ನೊಂದೆಡೆ ಯೋಗೀಶಗೌಡ ಗೌಡರ ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಕರಣಕ್ಕೆ ಸಹಕರಿಸಿದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರ ಮನೆಗೆ ಆಗಮಿಸಿದ ಯೋಗೀಶಗೌಡ ಸಹೋದರ ಗುರುನಾಥಗೌಡ ಪರಸ್ಪರ ಅಪ್ಪಿಕೊಂಡು ಸಿಹಿ ತಿನ್ನಿಸಿದರು.

ಇಂದು ನನ್ನ ತಮ್ಮ ಯೋಗೀಶಗೌಡ ಸತ್ತಿದ್ದಾನೆ ಅನ್ನಿಸುತ್ತಿಲ್ಲ. ಆತನ ಸಾವಿಗೆ ನ್ಯಾಯವನ್ನು ಸುಪ್ರೀಂಕೋರ್ಟ್ ನೀಡಿದೆ. ನ್ಯಾಯ ಎನ್ನುವುದು ಬಡವರು ಹಾಗೂ ಶ್ರೀಮಂತರಿಗೆ ಒಂದೇ ಎನ್ನುವುದನ್ನು ನ್ಯಾಯಾಲಯ ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಪ್ರಕರಣದಲ್ಲಿ ಹಿಂದೆ ಸರಿಯಲು ಏನೆಲ್ಲ ಪ್ರಯತ್ನಗಳು ನಡೆದರೂ ನಾನು ಮಾತ್ರ ತಮ್ಮನ ಸಾವಿಗೆ ಈಗ ಕಾನೂನು ಮೂಲಕ ನ್ಯಾಯ ಪಡೆದುಕೊಂಡಿದ್ದೇನೆ ಎಂಬ ಸಮಾಧಾನ ಹೊಂದಿದ್ದೇನೆ ಎಂದು ಗುರುನಾಥಗೌಡ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡರು.

ಒಟ್ಟಾರೆ, ಹೆಬ್ಬಳ್ಳಿ ಜಿಪಂ ಕ್ಷೇತ್ರದ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣವು ಮಾಜಿ ಸಚಿವರೂ ಆದ ವಿನಯ ಕುಲಕರ್ಣಿ ಅವರಿಗೆ ಮಗ್ಗುಲ ಮುಳ್ಳಾಗಿದ್ದು, ಬುಧವಾರ ಸುಪ್ರೀಂಕೋರ್ಟ್‌ ನೀಡಿದ ಮಹತ್ವದ ಆದೇಶವು ಅವರ ಬಹುತೇಕ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.ಕೊಲೆ ಪ್ರಕರಣದ ಹಿನ್ನೆಲೆ

2016 ಜೂನ್ 15 ರಂದು ಕೊಲೆಯಾಗಿದ್ದ ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಪ್ರಕರಣದಲ್ಲಿ ವಿನಯ ಕುಲಕರ್ಣಿ ಹಾಗೂ 17 ಜನ ಆರೋಪಿಗಲಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಅವರ ಶಾಸಕತ್ವ ಸ್ಥಾನ ರದ್ದಾಗಿತ್ತು. ಇದನ್ನು ಪ್ರಶ್ನಿಸಿ ವಿನಯ ಕುಲಕರ್ಣಿ ಹಾಗೂ ಇತರರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ದ್ವಿಸದಸ್ಯ ಪೀಠ ಮಧ್ಯಂತರ ಜಾಮೀನು ನೀಡಿದ್ದಲ್ಲದೇ ಶಾಸಕ ಸ್ಥಾನ ರದ್ದತಿಗೂ ಮಧ್ಯಂತರ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹಾಗೂ ಯೋಗೀಶಗೌಡ ಸಹೋದರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಅ. 28ರಂದು ತೀರ್ಪು ಕಾಯ್ದಿರಿಸಿತ್ತು. ಇದೀಗ ಮಂಗಳವಾರ ಮಹತ್ವದ ಆದೇಶ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಯೂನಿಟ್‌ ರಕ್ತ ಸಂಗ್ರಹಿಸುವ ಗುರಿ
ಬಡಜನರ ಶ್ರೇಯೋಭಿವೃದ್ಧಿಯೇ ಪ್ರಜಾಸೇವಾ ಆಂದೋಲನದ ಗುರಿ