ವಿದ್ಯುತ್ ಪೂರೈಕೆಗೆ ಹೆಸ್ಕಾಂನಿಂದ ಬೃಹತ್ ಸಿದ್ಧತೆ

KannadaprabhaNewsNetwork |  
Published : Nov 26, 2026, 02:00 AM IST
ಹೆಸ್ಕಾಂನ ವಿದ್ಯುತ್ ಪರಿವರ್ತಕಗಳು. | Kannada Prabha

ಸಾರಾಂಶ

ಗ್ರಾಹಕರು ಹಾಗೂ ರೈತರಿಗೆ ನಿರಂತರ ವಿದ್ಯುತ್ ಪೂರೈಸುವ ಉದ್ದೇಶದಿಂದ ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್‌ಫಾರ್ಮರ್‌) ನಿರ್ವಹಣೆ ಮತ್ತು ದುರಸ್ತಿಗೆ ಹೆಸ್ಕಾಂ ವಿಶೇಷ ಆದ್ಯತೆ ನೀಡಿದೆ.

ಹುಬ್ಬಳ್ಳಿ:

ಗ್ರಾಹಕರು ಹಾಗೂ ರೈತರಿಗೆ ನಿರಂತರ ವಿದ್ಯುತ್ ಪೂರೈಸುವ ಉದ್ದೇಶದಿಂದ ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್‌ಫಾರ್ಮರ್‌) ನಿರ್ವಹಣೆ ಮತ್ತು ದುರಸ್ತಿಗೆ ಹೆಸ್ಕಾಂ ವಿಶೇಷ ಆದ್ಯತೆ ನೀಡಿದೆ. ಪರಿವರ್ತಕಗಳು ವಿಫಲವಾದ ತಕ್ಷಣವೇ ಬದಲಾಯಿಸಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯ ದಾಸ್ತಾನು ಹಾಗೂ ದುರಸ್ತಿ ವ್ಯವಸ್ಥೆಯನ್ನು ಬಲಪಡಿಸಿದೆ.

ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 3,46,900ಕ್ಕೂ ಅಧಿಕ ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿವರ್ಷ ಸುಮಾರು 20 ಸಾವಿರ ಹೊಸ ಪರಿವರ್ತಕಗಳನ್ನು ವಿದ್ಯುತ್ ವಿತರಣಾ ಜಾಲಕ್ಕೆ ಸೇರ್ಪಡೆ ಮಾಡಲಾಗುತ್ತಿದೆ.

2026-27ನೇ ಸಾಲಿನಲ್ಲಿ ಈ ಏಳು ಜಿಲ್ಲೆಗಳಲ್ಲಿ 30,866 ಪರಿವರ್ತಕಗಳು ವಿಫಲವಾಗಿದ್ದು, ಎಲ್ಲವನ್ನೂ ಬದಲಾಯಿಸಿ ಹೊಸ ಪರಿವರ್ತಕಗಳನ್ನು ಅಳವಡಿಸಲಾಗಿದೆ. ಅಲ್ಲದೆ, 31,608 ಪರಿವರ್ತಕಗಳನ್ನು ದುರಸ್ತಿಗೊಳಿಸಿ ಮರುಬಳಕೆಗೆ ಸಿದ್ಧಪಡಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 750 ಪರಿವರ್ತಕಗಳನ್ನು ದುರಸ್ತಿಗೊಳಿಸಿ ಹೆಚ್ಚುವರಿಯಾಗಿ ದಾಸ್ತಾನಿಗೆ ಸೇರಿಸಲಾಗಿದೆ.

ವಿಫಲ ಪರಿವರ್ತಕಗಳನ್ನು ತಕ್ಷಣ ಬದಲಾಯಿಸುವ ಉದ್ದೇಶದಿಂದ ಏಳು ಜಿಲ್ಲೆಗಳ ವಿವಿಧೆಡೆ 26 ಟಿಸಿ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ 3,100 ಪರಿವರ್ತಕಗಳನ್ನು ದಾಸ್ತಾನಿನಲ್ಲಿ ಇರಿಸಲಾಗಿದ್ದು, ಬೆಳಗಾವಿಯಲ್ಲಿ 931, ಬಾಗಲಕೋಟೆಯಲ್ಲಿ 532, ವಿಜಯಪುರದಲ್ಲಿ 451, ಉತ್ತರ ಕನ್ನಡದಲ್ಲಿ 376, ಹಾವೇರಿಯಲ್ಲಿ 311, ಧಾರವಾಡದಲ್ಲಿ 253 ಹಾಗೂ ಗದಗ ಜಿಲ್ಲೆಯಲ್ಲಿ 202 ಪರಿವರ್ತಕಗಳನ್ನು ಸಿದ್ಧವಾಗಿಡಲಾಗಿದೆ.

60 ದುರಸ್ತಿ ಕೇಂದ್ರಗಳ ಮೂಲಕ ಸೇವೆ:

ಪರಿವರ್ತಕಗಳ ದುರಸ್ತಿ ಹಾಗೂ ಮರುಬಳಕೆಗೆ ಅನುಕೂಲವಾಗುವಂತೆ ಹೆಸ್ಕಾಂ ವ್ಯಾಪ್ತಿಯ ವಿವಿಧ ತಾಲೂಕುಗಳಲ್ಲಿ 57 ದುರಸ್ತಿ ಕೇಂದ್ರ ಸ್ಥಾಪಿಸಲಾಗಿದೆ. ಇದರೊಂದಿಗೆ ಹುಬ್ಬಳ್ಳಿಯಲ್ಲಿ ಎರಡು ಹಾಗೂ ಬೆಳಗಾವಿಯಲ್ಲಿ ಒಂದು ಬೃಹತ್ ದುರಸ್ತಿ ಕೇಂದ್ರ ಸೇರಿದಂತೆ ಒಟ್ಟು 60 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಪರಿವರ್ತಕ ವೈಫಲ್ಯದ ಕುರಿತು ಗ್ರಾಹಕರು ದೂರು ದಾಖಲಿಸಲು ಉಚಿತ ಸಹಾಯವಾಣಿ 1800-425-4754 ಆರಂಭಿಸಲಾಗಿದೆ. ದೂರು ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪರಿವರ್ತಕ ಬದಲಾವಣೆಗೆ ಕ್ರಮ ಕೈಗೊಳ್ಳಲಿದ್ದಾರೆ.

ವಿಶೇಷವಾಗಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತ್ವರಿತ ಸ್ಪಂದನೆಗೆ ಆದ್ಯತೆ ನೀಡಲಾಗಿದೆ. ರೈತರಿಂದ ದೂರು ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿಳಂಬವಿಲ್ಲದೆ ಪರಿವರ್ತಕ ಬದಲಾಯಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಯೂನಿಟ್‌ ರಕ್ತ ಸಂಗ್ರಹಿಸುವ ಗುರಿ
ವಿಕೆಗೆ ಬರಸಿಡಿಲು ನೀಡಿದ ಸುಪ್ರೀಂ ಆದೇಶ!