ಜಿಲ್ಲೆಯಲ್ಲಿ 4250 ಎಕರೆ ವಿಸ್ತೀರ್ಣದಲ್ಲಿ ನೈಸರ್ಗಿಕ ಕೃಷಿ ಅಳವಡಿಕೆ ಗುರಿ: ಜಿಪಂ ಸಿಇಒ ನಂದಿನಿ

KannadaprabhaNewsNetwork |  
Published : Oct 31, 2025, 02:00 AM IST
30ಕೆಎಂಎನ್ ಡಿ13,14 | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ 5 ಗುಚ್ಛ ಗ್ರಾಮಗಳನ್ನು ಪ್ರಮುಖ ನದಿಗಳ ಪಾತ್ರದಲ್ಲಿ ಹಾಗೂ ಉಳಿದ 29 ಗುಚ್ಛ ಗ್ರಾಮಗಳಲ್ಲಿ ಅತಿ ಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಿರುವ ಗ್ರಾಪಂಗಳನ್ನು ಗುರುತಿಸಲಾಗಿದೆ. ಒಟ್ಟು 34 ಗುಚ್ಛ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ 34 ಗುಚ್ಛ ಗ್ರಾಮಗಳ 4250 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಅಳವಡಿಕೆ ಮಾಡಲು ಗುರಿ ನಿಗಧಿಪಡಿಸಲಾಗಿದೆ. ಕೃಷಿ ಸಖಿಯರು ಸಕ್ರಿಯ ಹಾಗೂ ಪರಿಣಾಮಕಾರಿಯಾಗಿ ಭಾಗವಹಿಸಲು ಕ್ರಮ ವಹಸಬೇಕು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.

ತಾಲೂಕಿನ ವಿ.ಸಿ.ಫಾರ್ಮ್ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನೈಸರ್ಗಿಕ ಕೃಷಿ ಕುರಿತು ಕೃಷಿ ಸಖಿಯರಿಗೆ ಏರ್ಪಡಿಸಿದ್ದ 5 ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಉತ್ಪಾದನೆಗಿಂತ ಉತ್ಕೃಷ್ಟ ಗುಣಮಟ್ಟದ ಉತ್ಪನ್ನ ಬೆಳೆಯಬಹುದು. ಈ ಬಗ್ಗೆ ರೈತರಿಗೆ ಪ್ರೇರೇಪಣೆ ನೀಡಬೇಕೆಂದು ಸೂಚಿಸಿದರು.

ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ 5 ಗುಚ್ಛ ಗ್ರಾಮಗಳನ್ನು ಪ್ರಮುಖ ನದಿಗಳ ಪಾತ್ರದಲ್ಲಿ ಹಾಗೂ ಉಳಿದ 29 ಗುಚ್ಛ ಗ್ರಾಮಗಳಲ್ಲಿ ಅತಿ ಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಿರುವ ಗ್ರಾಪಂಗಳನ್ನು ಗುರುತಿಸಲಾಗಿದೆ. ಒಟ್ಟು 34 ಗುಚ್ಛ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಪ್ರತಿ ಗುಚ್ಛಕ್ಕೆ 2 ಕೃಷಿ ಸಖಿ ಸೇರಿದಂತೆ ಒಟ್ಟು 68 ಕೃಷಿ ಸಖಿಯರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಗುಚ್ಛದಡಿ 125 ಫಲಾನುಭವಿಗಳಂತೆ 34 ಗುಚ್ಛಗಳಿಗೆ ಒಟ್ಟು 4250 ಫಲಾನುಭವಿಗಳನ್ನು ಆಯ್ಕೆ ಮಾಡಿ ನೈಸರ್ಗಿಕ ಕೃಷಿ ಅಳವಡಿಕೆಗಾಗಿ ಗರಿಷ್ಠ 4 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು ಎಂದರು.

ರೈತರು ಬೆಳೆದ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡುವುದರಿಂದ ರೈತರಿಗೆ ಉತ್ತಮ ದರ ಲಭಿಸಲಿದೆ. ಈ ಬಗ್ಗೆ ಕೃಷಿ ಸಖಿಯರು ರೈತರಿಗೆ ವ್ಯಾಪಕವಾಗಿ ಅರಿವು ಮೂಡಿಸಬೇಕೆಂದು ತಿಳಿಸಿದರು.

ಇದೇ ವೇಳೆ ಕೃಷಿ ಸಖಿಯರಿಗೆ ಪ್ರಮಾಣ ಪತ್ರ ವಿತರಿಸಿದ ಅವರು, ಇತ್ತೀಚಿನ ದಿನಗಳಲ್ಲಿ ತರಬೇತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಆಯೋಜಿಸುವುದು ಮತ್ತು ಭಾಗವಹಿಸುವುದು ನಡೆಯುತ್ತದೆ. ಆದ್ದರಿಂದಲೇ ನಾನು ಈ ತರಬೇತಿ ಉದ್ಘಾಟನೆ ಮತ್ತು ಸಮಾರೋಪ ಎರಡು ಕಾರ್ಯಕ್ರಮಗಳಿಗೂ ಖುದ್ದು ಹಾಜರಾಗಿ 2 ಗಂಟೆಗಳಿಗೂ ಹೆಚ್ಚು ಕಾಲ ತರಬೇತಿಯಲ್ಲಿ ಭಾಗವಹಿಸಿ ಕೃಷಿ ಸಖಿಯರಿಗೆ ತರಬೇತಿಯ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತಮ 3 ಕೃಷಿ ಸಖಿಯರಿಗೆ ಸನ್ಮಾನ ಮಾಡಲಾಗಿದೆ ಎಂದರು.

ಕೇಳಲಾದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರೊಳಗಾಗಿ ತರಬೇತಿ ಕೈಪಿಡಿಯನ್ನು ಮತ್ತೊಮ್ಮೆ ಅಧ್ಯಯನ ನಡೆಸಿ ಮಾಹಿತಿ ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ತರಬೇತಿಗೆ ಮಾಡಿರುವ ಒಂದು ರುಪಾಯಿ ವ್ಯರ್ಥವಾಗಬಾರದು. ಆ ನಿಟ್ಟಿನಲ್ಲಿ ಕೃಷಿ ಸಖಿಯರು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಯೋಜನೆ ಯಶಸ್ವಿ ಅನುಷ್ಟಾನಕ್ಕೆ ಶ್ರಮಿಸಬೇಕು ಎಂದರು.

ಸಮಾರೋಪ ಸಮಾರಂಭದಲ್ಲಿ ವಿ.ಸಿ.ಫಾರ್ಮ್ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ, ಕೃಷಿ ವಿಜ್ಞಾನಗಳ ವಿವಿ ಡೀನ್ (ಸ್ನಾತಕೋತ್ತರ) ಡಾ.ಚಂದ್ರಪ್ಪ, ಸಹ ಸಂಶೋಧನಾ ನಿರ್ದೇಶಕರಾದ ಡಾ.ಬಿ.ಎಸ್.ಬಸವರಾಜು, ಡಾ.ಸನತ್ ಕುಮಾರ್, ಡಾ.ಕಿತ್ತೂರಮಠ, ಡಾ.ಸತೀಶ್ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?