ಕನ್ನಡಪ್ರಭ ವಾರ್ತೆ ಮದ್ದೂರು
ಶಿಕ್ಷಣ ಸಂಸ್ಥೆ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಶಿಕ್ಷಕರು ಮನುಷ್ಯನ ಹೃದಯ, ಜೀರ್ಣಾಂಗ ವ್ಯವಸ್ಥೆ, ಡಿಎನ್ಎ ಮಾದರಿ, ವಿದ್ಯುತ್ತು, ನೀರಿನ ಸಂರಕ್ಷಣೆ ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಮಾದರಿಗಳನ್ನು ಅನಾವರಣಗೊಳಿಸುವ ಪ್ರಯತ್ನ ನಡೆಸಿದ್ದು ಗಣ್ಯರ ಮೆಚ್ಚುಗೆಗೆ ಪಾತ್ರವಾಯಿತು.
ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಭಾರತಿ ಪದವಿ ಕಾಲೇಜಿನ ನಿವೃತ್ತ ಪ್ರೊ.ಎಸ್.ರೇವಣ್ಣ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಕೇವಲ ಪಠ್ಯಪುಸ್ತಕ ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೆ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.ವಿಜ್ಞಾನ ಮತ್ತು ತಂತ್ರಜ್ಞಾನ ಮಾನವನ ಜೀವನದಲ್ಲಿ ತುಂಬಾ ಅಗತ್ಯವಾಗಿದೆ. ಹೀಗಾಗಿ ದೈನಂದಿನ ಜೀವನದಲ್ಲಿ ವಿಜ್ಞಾನ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಹೇಳಿದರು.
ನ.೧ರಂದು ನೃತ್ಯಾರಾಧನೆ ಕಾರ್ಯಕ್ರಮ
ಶ್ರೀನಂದಿಕೇಶ್ವರ ಭರತಾನಟ್ಯ ಕಲಾ ಶಾಲೆಯ ೧೮ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಂದಿಕೇಶ್ವರ ನೃತ್ಯಾರಾಧನೆ ಕಾರ್ಯಕ್ರಮವನ್ನು ನ.೧ರ ಸಂಜೆ ೪ ಗಂಟೆಗೆ ನಗರದ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕಲಾ ಶಾಲೆಯ ವಿದುಷಿ ಕೆ.ಎಸ್.ಶೈಲಾ ತಿಳಿಸಿದರು.
ದಿ.ಕೆ.ಎನ್.ನಾಗರಾಜು ಅವರ ಸ್ಮರಣಾರ್ಥ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ನಿವೃತ್ತ ಮುಖ್ಯ ಶಿಕ್ಷಕಿ ಡಾ. ಬಿ.ಜಿ.ಉಮಾ ಅವರಿಗೆ ಶ್ರೀ ನಂದಿಕೇಶ್ವರ ಕಲಾಶ್ರೀ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ವಿದುಷಿ ಉಷಾ ಬಸಪ್ಪ ಅವರಿಗೆ ಶ್ರೀ ನಂದಿಕೇಶ್ವರ ನೃತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.