ಕನ್ನಡಪ್ರಭ ವಾರ್ತೆ ಕುಶಾಲನಗರ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಡಿಕೇರಿ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ಕುಶಾಲನಗರದಲ್ಲಿ ನಡೆಯಿತು.ಕುಶಾಲನಗರ ಪುರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ನದಿ ನೀರಿನ ಪರಿಸ್ಥಿತಿ, ಪರ್ಯಾಯ ವ್ಯವಸ್ಥೆ ಗ್ರಾಮಗಳಲ್ಲಿ ಕೊಳವೆಬಾವಿಗಳ ಸ್ಥಿತಿಗತಿ ಮತ್ತಿತರ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ಬೇಸಿಗೆ ಅವಧಿಯಲ್ಲಿ ಜನ ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸುವಂತೆ ಶಾಸಕರು ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿದರು. ಕುಶಾಲನಗರ ತಾಲೂಕಿನ 15 ಗ್ರಾಮ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಸಂದರ್ಭ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದರು. 2024ರ ಪರಿಸ್ಥಿತಿ ಮತ್ತೆ ಈ ಬಾರಿ ಎದುರಾಗುವ ಸಾಧ್ಯತೆ ಅಧಿಕವಾಗಿದ್ದು ಈ ಸಂಬಂಧ ಪ್ರತಿ ಗ್ರಾಮಗಳಲ್ಲಿ ನದಿ ನೀರಿಗೆ ಪರ್ಯಾಯವಾಗಿ ನೀರಿನ ಮೂಲಗಳನ್ನು ಸರಿಪಡಿಸಿಕೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಯಿತು. ವಿದ್ಯುತ್ ಇಲಾಖೆ ಮತ್ತು ನೀರು ಸರಬರಾಜು ಮಂಡಳಿ ಈ ಸಂಬಂಧ ಸಂಪೂರ್ಣ ರೀತಿಯಲ್ಲಿ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವುದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಅಗತ್ಯವಿರುವ ಹೊಸ ಕೊಳವೆಬಾವಿ ಕೊರೆಯುವ ಬಗ್ಗೆ ಮತ್ತು ಹಳೆಯ ಕೊಳವೆ ಬಾವಿಗಳ ನಿರ್ವಹಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಈ ಸಂಬಂಧ ಎಲ್ಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಶಾಸಕರು ಖಡಕ್ ಸೂಚನೆ ನೀಡಿದರು. ಗ್ರಾಮೀಣ ನೀರು ಸರಬರಾಜು ವಿಭಾಗದ ಅಧಿಕಾರಿ ವೀರೇಂದ್ರ ಅವರೊಂದಿಗೆ ಚರ್ಚಿಸಿದ ಶಾಸಕರು ಎಲ್ಲಾ ಗ್ರಾಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ತನಗೆ ತಕ್ಷಣ ನೀಡುವಂತೆ ತಿಳಿಸಿದರು. ಕುಶಾಲನಗರ ಸೆಸ್ಕ್ ಅಧಿಕಾರಿ ಮಂಜುನಾಥ್ ತಮ್ಮ ಇಲಾಖೆಯ ಮಾಹಿತಿಯನ್ನು ಶಾಸಕರಿಗೆ ಒದಗಿಸದ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳಿಂದ ಮಾಹಿತಿ ಲಭಿಸದಿದ್ದಲ್ಲಿ ಜನರಿಗೆ ಉತ್ತರ ನೀಡಲು ಕಷ್ಟವಾಗುತ್ತದೆ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾಗಿದೆ ಎಂದು ಶಾಸಕರು ನಿರಂತರ ಸಂಪರ್ಕದಲ್ಲಿ ಇರುವಂತೆ ಸೂಚನೆ ನೀಡಿದರು. ಹಾರಂಗಿ ಜಲಾಶಯ ಚಿಕ್ಲಿಹೊಳೆ ಜಲಾಶಯ ದಲ್ಲಿ ಸಂಗ್ರಹ ಪ್ರಮಾಣದ ನೀರಿನ ಬಗ್ಗೆ ಮಾಹಿತಿ ಪಡೆದ ಶಾಸಕರು ಅಗತ್ಯ ಬಿದ್ದಲ್ಲಿ ನೀರಿನ ಬಳಕೆಗೆ ಕ್ರಮ ಕೈಗೊಳ್ಳುವಂತೆ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳಿಗೆ ಸೂಚಿಸಿದರು. ಕೊಳವೆ ಬಾವಿಯಿಂದ ಮುಖ್ಯ ಪೈಪ್ ಗಳಿಗೆ ನೀರು ಸಂಪರ್ಕ ಕಲ್ಪಿಸುವ ಬಗ್ಗೆ ಸಲಹೆ ನೀಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಈ ಮೂಲಕ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಪಡೆಯುವ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಲಭ್ಯವಿರುವ ಜಾಗದ ಬಗ್ಗೆ ಶಾಸಕರು ಸಮಗ್ರ ಮಾಹಿತಿ ಕಲೆ ಹಾಕಿದರು. ಜಾಗಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಆಸ್ಪತ್ರೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವಚ್ಛ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿದರು.ಸಭೆಯಲ್ಲಿ ಆಡಳಿತ ಅಧಿಕಾರಿ ಅಬ್ದುಲ್ಲಾ, ಕಾರ್ಯನಿರ್ವಾಹಣಾಧಿಕಾರಿ ಪರಮೇಶ್ವರ ತಾಲೂಕು ತಹಸಿಲ್ದಾರ್ ಕಿರಣ್ ಜಿ ಗೌರಯ್ಯ ತಾಲೂಕಿನ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ಮತ್ತು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ಮತ್ತಿತರರು ಇದ್ದರು.